ಕಾನೂನುಗಳ ಅರಿವು ಪಡೆಯಿರಿ
ಕೋಲಾರ,ಅ,೪-ಮನುಷ್ಯನ ಜೀವನದಲ್ಲಿ ಇಂದು ಆಹಾರ, ನೀರಿನಷ್ಟೇ ಕಾನೂನು ಅತಿ ಮುಖ್ಯವಾಗಿದ್ದು, ದೈನಂದಿನ ಬದುಕಿಗೆ ಅಗತ್ಯವಾದ ಕನಿಷ್ಟ ಕಾನೂನುಗಳ ಅರಿವು ಪಡೆಯಿರಿ, ಮಾದಕ ವಸ್ತುಗಳ ಸೇವನೆಗೆ ತುತ್ತಾಗದೇ ಅಪರಾಧ ಮುಕ್ತ ಜೀವನ ನಡೆಸಿ ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ ಕರೆ ನೀಡಿದರು.
ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪುಲುಗೂರುಕೋಟೆ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯವಿಭಾಗದಿಂದ ಆಯೋಜಿಸಿದ್ದ ಗ್ರಾಮೀಣ ಕಲಿಕಾ ಶಿಬಿರದಲ್ಲಿ ‘ಏಕ್ ಪೇಡ್ ಮಾ ಕೆ.ನಾಮ್ ’ ಅಭಿಯಾನದ ಅಂಗವಾಗಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜಕ್ಕೆ ಹಾಗೂ ಯುವಪೀಳಿಗೆಗೆ ಕಂಟಕವಾಗಿರುವ ಮಾದಕ ವ್ಯಸನದಿಂದ ದೂರ ಮಾಡಲು ವಿದ್ಯಾರ್ಥಿಗಳಿಗೆ ಅರಿವು ನೀಡುವ ಕೆಲಸ ಮಾಡುತ್ತಿದ್ದು, ಕಾಲೇಜಿನ ಆವರಣದಲ್ಲಿ ಅಥವಾ ಎಲ್ಲೇ ಆಗಲಿ ಮಾದಕ ವಸ್ತುಗಳ ಸಾಗಾಣೆ, ಮಾರಾಟ ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ ಎಂದು ಕಿವಿಮಾತು ಹೇಳಿದರು.
ಬಾಲ್ಯವಿವಾಹ ಸಮಾಜಕ್ಕೆ ಕಂಟಕವಾಗಿದೆ ಎಂದ ಅವರು ಇದರ ಸಂಪೂರ್ಣ ತಡೆಗೆ ವಿದ್ಯಾರ್ಥಿ ಸಯುದಾಯದ ಸಹಕಾರ ಅಗತ್ಯವಿದೆ, ನಿಮ್ಮ ಸುತ್ತಮುತ್ತ ಬಾಲ್ಯವಿವಾಹ ಆಗುತ್ತಿದ್ದರೆ ನೀವು ಕೂಡಲೇ ೧೦೯೮ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.
ಭ್ರೂಣ ಲಿಂಗ ಪತ್ತೆ ಮಾಡುವುದು ಸಹಾ ಅಪರಾಧವಾಗಿದ್ದು,ಕಠಿಣ ಶಿಕ್ಷೆ ಇದೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೂ ಸರ್ಕಾರ ಕಾನೂನು ಮಾಡಿದ್ದು, ಇದರ ಕುರಿತು ನೀವು ಅರಿತು ಸಮಾಜಕ್ಕೂ ತಿಳಿಸಿಕೊಡಿ ಎಂದರು.
ಕಾರ್ಯಕ್ರಮದಲ್ಲಿ ಶಿಬಿರದ ಸಂಯೋಜಕರಾದ ಸ್ನಾತಕೋತ್ತರಕೇಂದ್ರದ ಸಮಾಜಕಾರ್ಯ ವಿಭಾಗದ ಡಾ.ರಾಜಣ್ಣ, ವಿದ್ಯಾರ್ಥಿಜೀವನವು ಅತ್ಯಂತ ಅಮೂಲ್ಯವಾಗಿದ್ದು, ಈ ಸಂದರ್ಭದಲ್ಲಿ ನೀವು ಎಚ್ಚರಿಕೆಯ ಹೆಜ್ಜೆಯಿಡಿ, ನಿಮ್ಮ ಮೂರ್‍ನಾಲ್ಕು ವರ್ಷದ ಜವಾಬ್ದಾರಿಯುತ ನಡೆ ನಿಮ್ಮ ಇಡೀ ಜೀವನವನ್ನು ಸುಖಮಯವಾಗಿಸುತ್ತದೆ ಆದರೆ ನೀವು ಈ ಮೂರ್‍ನಾಲ್ಕು ವರ್ಷ ತಪ್ಪು ಹಾದಿ ತುಳಿದರೆ ಇಡೀ ಜೀವನ ಕಷ್ಟ ಅನುಭವಿಸುತ್ತೀರಿ ಎಂದು ಎಚ್ಚರಿಸಿದರು.
ಶಿಬಿರದ ಸಹಸಂಯೋಜಕ ಡಾ.ಗುಂಡಪ್ಪ ದೇವಿಕೇರಿ, ಉಪನ್ಯಾಸಕರಾದ ಶಿವರಾಜ್‌ಕುಮಾರ್,ಬಾಗೇಪಲ್ಲಿಸಿಡಿಪಿಒ ರಾಮಚಂದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಕಾನೂನು ಪ್ರಾಧಿಕಾರದ ಸಹಾಯವಾಣಿ ೧೫೧೦೦ ಕುರಿತು ಮಾಹಿತಿ ನೀಡಲಾಯಿತು. ಉತ್ತರ ವಿವಿಯ ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿ ೧೨೫ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.