ಮೇಕೆಗಳ ಸಾವು:ಮಲ್ಲಿಕಾರ್ಜುನ್ ಆರ್ಥಿಕ ನೆರವು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.04: ಬೀದಿನಾಯಿಗಳ ದಾಳಿಯಿಂದ 09 ಮೇಕೆಗಳು ಮೃತಪಟ್ಟಿದ್ದ ಹಿನ್ನೆಲೆ ಮೇಕೆ ಕಳೆದುಕೊಂಡಿದ್ದ ರೈತನ ಮನೆಗೆ ಸಮಾಜಸೇವಕ ಹಾಗು ರಾಜ್ಯ ಆರ್.ಟಿ.ಓ ಅಧಿಕಾರಿಗಳ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಭೇಟಿ ನೀಡಿ ಆರ್ಥಿಕ ನೆರವು ನೀಡಿ ಆತ್ಮಸ್ಥೈರ್ಯ ತುಂಬಿದರು.
ತಾಲೂಕಿನ ಕಸಬಾ ಹೋಬಳಿಯ ಮತ್ತಿಘಟ್ಟ ಗ್ರಾಮದ ರೈತ ಶಿವಕುಮಾರ್ ಎಂಬ ಕೃಷಿಕ ತಮ್ಮ ಮನೆಯ ಪಕ್ಕದಲ್ಲಿ ಚಿಕ್ಕ ಶೆಡ್ ನಿರ್ಮಾಣ ಮಾಡಿಕೊಂಡು ಕುರಿ ಮತ್ತು ಮೇಕೆ ಸಾಕಾಣೆ ಮಾಡಿಕೊಂಡಿದ್ದರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೀದಿ ನಾಯಿಗಳು ಮೇಕೆಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆ 09 ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿದ್ದವು ಇದರಿಂದ ರೈತ ಶಿವಕುಮಾರ್ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದ್ದು. ವಿಷಯ ತಿಳಿದ ಆರ.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಮತ್ತಿಘಟ್ಟ ಗ್ರಾಮಕ್ಕೆ ಭೇಟಿ ನೀಡಿ ರೈತನಿಗೆ ಧೈರ್ಯ ತುಂಬಿದರು. ನಂತರ ಮಾತನಾಡಿ ರೈತರು ತಾವು ಸಾಕಾಣೆ ಮಾಡುವ ಸಾಕುಪ್ರಾಣಿಗಳನ್ನು ಬಹಳ ಎಚ್ಚರಿಕೆಯಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು ಇಲ್ಲವಾದರೆ ಈ ರೀತಿಯ ಅನಾಹುತಕ್ಕೆ ಸಿಲುಕಿ ಆರ್ಥಿಕ ನಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕೆಂದು ಶಿವಕುಮಾರ್ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮದ ಹಲವರು ಹಾಜರಿದ್ದರು.