ಚಾಮರಾಜನಗರ ದಸರಾ: ಆಕರ್ಷಕ ದೀಪಾಲಂಕಾರಕ್ಕೆ ಚಾಲನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.04-ಚೆಲುವ ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಅಕರ್ಷಕ ವಿದ್ಯುತ್ ದೀಪಾಲಂಕಾರಕ್ಕೆ ಇಂದು ಸಂಜೆ ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.
ನಗರದ ಚಾಮರಾಜೇಶ್ವರ ದೇವಾಲಯದ ಉದ್ಯಾನವನದ ಬಳಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ದಸರಾ ದೀಪಾಲಂಕಾರಕ್ಕೆ ವಿದ್ಯುತ್ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು.
ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಇನ್ನಿತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದಸರಾ ಮಹೋತ್ಸವದ ಅಂಗವಾಗಿ ಚಾಮರಾಜನಗರ ಪಟ್ಟಣ ವ್ಯಾಪ್ತಿಯಲ್ಲಿ 8 ಕಿ.ಮೀ.ಗೂ ಹೆಚ್ಚು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ನಗರದ ಪ್ರಮುಖ 10 ವೃತ್ತಗಳಲ್ಲಿ ವಿಶೇಷವಾಗಿ ದೀಪಾಲಂಕಾರ ಗಮನ ಸೆಳೆಯುತ್ತಿದೆ. ಬುದ್ಧ, ಬಸವ, ಅಂಬೇಡ್ಕರ್ ಪ್ರತಿಕೃತಿಗಳಿಗೆ ದೀಪಾಲಂಕಾರ ಮಾಡಲಾಗಿದೆ. ದೇವರ ಪ್ರತಿಕೃತಿಗಳಿಗೂ ಅಕರ್ಷಕವಾಗಿ ಬಣ್ಣಬಣ್ಣದ ದೀಪಗಳನ್ನು ಅಳವಡಿಸಲಾಗಿದೆ.
ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಣ್ಣದ ದೀಪಗಳಿಂದ ಬಿಂಬಿಸಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬಣ್ಣದ ಬೆಳಕಿನ ಸ್ವಾಗತ ಕಮಾನುಗಳನ್ನು ಹಾಕಲಾಗಿದೆ. ಜಿಲ್ಲಾಡಳಿತ ಭವನ, ಜಿಲ್ಲಾ ಪೊಲೀಸ್ ಕಚೇರಿ ಸೇರಿದಂತೆ ವಿವಿಧೆಡೆ ವಿಶೇಷವಾಗಿ ದೀಪಾಲಂಕಾರ ಮಾಡಲಾಗಿದೆ.
ಜಗಮಗಿಸುವ ದೀಪಗಳಿಂದ ನಗರವನ್ನು ಸಿಂಗಾರಗೊಳಿಸಲಾಗಿದ್ದು, ಚಾಮರಾಜನಗರ ಪಟ್ಟಣ ಕಂಗೊಳಿಸುತ್ತಿದೆ.