ಮಾಹಿತಿ ಹಕ್ಕು ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಬೇಕು; ಅವಧೂತ ಶ್ರೀ
ಚಿಂಚೋಳಿ, ಸೆ.9- ಮಾಹಿತಿ ಹಕ್ಕು ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಬೇಕು. ತಾವು ಮಾಡುವ ಕೆಲಸ ಅನ್ಯಾಯ ಎದುರಿಸುತ್ತಿರುವವರ ಬಗ್ಗೆ ಕಾಳಜಿ ವಹಿಸುವಂತಿರಬೇಕು ಎಂದು ಡಾ.ಬಸವಲಿಂಗ ಶ್ರೀ ಅವಧೂತರು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಚಂದಾಪುರ ಪಟ್ಟಣದ ಬಂಜಾರ ಭವನದಲ್ಲಿ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ತಾಲ್ಲೂಕಿನ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಶಾಲಾ ಮಕ್ಕಳಿಗೆ ವಿಶೇಷ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ರಕ್ಷಣೆ ಅಣುಕು ಪ್ರದರ್ಶನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದ ಅವರು, ಇಂತಹ ಹಲವಾರು ಸಂಘ ಸಂಸ್ಥೆಗಳಿರುವುದು ಜನರ ಒಳಿತಿಗಾಗಿಯೇ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಅನ್ಯಾಯವಾದಾಗ ಅವರ ನೆರವಿಗೆ ಬಂದು ನ್ಯಾಯ ಕೊಡಿಸುವಂತಹ ಕಾರ್ಯಗಳಾಗಬೇಕು ಎಂದು ಆಶೀರ್ವಚಿಸಿದರು.
ಇದೇ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗಾಗಿ ವಿಶೇಷವಾದ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಪುರಸಭೆ ಸಿಬ್ಬಂದಿಗಳಿಗೆ ಸನ್ಮಾನವನ್ನು ಮಾಡಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹಮ್ಮದ್ ಗಫಾರ್, ಅಗ್ನಿಶಾಮಕ ಅಧಿಕಾರಿ ಎಸ್ ಕೆ ಹಸನ್, ಪ್ರಕಾಶ ನಿಷ್ಟಿ, ಶರಣು ಪಾಟೀಲ್ ಮೊತಕಪಳ್ಳಿ, ನರಸಮ್ಮ ಆವಂಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.