ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕ್ರಮ
ವಿಜಯಪುರ,ಸೆ.9: ಬಬಲೇಶ್ವರ ಮತಕ್ಷೇತ್ರ ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವನ್ನಾಗಿಸುವ ಪಣ ತೊಟ್ಟು ಮತಕ್ಷೇತ್ರದಾದ್ಯಂತ ರಸ್ತೆ, ವಿದ್ಯುತ್, ನೀರಾವರಿ ಸೇರಿದಂತೆ ಎಲ್ಲ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವÀ ಡಾ. ಎಂ.ಬಿ. ಪಾಟೀಲ ಅವರು ಹೇಳಿದರು.
ಬಬಲೇಶ್ವರ ತಾಲೂಕಿನ ಮಮದಾಪುರ-ದೂಡಿಹಾಳ ಮುಖಾಂತರ ರಾಷ್ಟ್ರೀಯ ಹೆದ್ದಾರಿ-218ಕ್ಕೆ ಕೂಡುವ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭಾನುವರ ಮಮದಾಪುರದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಶೇಗುಣಸಿಯಿಂದ ಮಮದಾಪುರವರೆಗೆ ಸುಮಾರು 9.5 ಕಿ.ಮೀ. ರಸ್ತೆಯನ್ನು 15 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಮುಂದುವರೆದ ಭಾಗವಾಗಿ ಮಮದಾಪುರದಿಂದ 218ರವರೆಗೆ 11.6 ಕಿ.ಮೀ. ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಬಬಲೇಶ್ವರ ಮತಕ್ಷೇತ್ರದಲ್ಲಿಯೇ ಮಮದಾಪುರ ಹೋಬಳಿಗೆ ಅತಿ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಬಹು ದಶಕಗಳ ಕನಸಾಗಿದ್ದ ಮಮದಾಪುರ ಕೆರೆ ತುಂಬುವುದು, ಕಳೆದ 2013 ರಿಂದ 2018ರ ಅವಧಿಯಲ್ಲಿ ನಾನು ಜಲಸಂಪನ್ಮೂಲ ಸಚಿವನಾದ ಮೇಲೆ ಮಮದಾಪುರ ಕೆರೆ ಹೂಳು ತೆಗೆದು, ಮನಸ್ಸಿದ್ದರೆ ಮಾರ್ಗ ಎಂಬ ಧೋರಣೆಯೊಂದಿಗೆ ಸಿದ್ದೇಶ್ವರ ಶ್ರೀಗಳ ಪ್ರೇರಣೆಯೊಂದಿಗೆ ಅಸಾಧ್ಯವಾದುದನ್ನು ಸಾಧ್ಯವನ್ನಾಗಿಸಲಾಗಿದೆ ಎಂದು ಹೇಳಿದರು.
ಮಮದಾಪುರ ಕೆರೆ ತುಂಬುವುದರಿಂದ ಅಂತರಜಲ ಮಟ್ಟ ಹೆಚ್ಚಾಗಿ ಈ ಭಾಗದಲ್ಲಿ ಅಭಿವೃದ್ದಿಯಾಗಿ, ರೈತರಿಗೆ ಅನುಕೂಲವಾಗಿದೆ. ಕೆಲವು ದಿನಗಳ ಹಿಂದೆ ಹಿಂದುಸ್ತಾನ ಕೋಕಾ ಕೋಲಾ ಬೆವೆರಜಿಸ್ ಕಂಪನಿ ವತಿಯಿಂದ ಸಿಎಸ್‍ಆರ್ ಅನುದಾನದಲ್ಲಿ ಐತಿಹಾಸಿಕ ಮಮದಾಪುರ ಕೆರೆಯ ಪುನರುಜ್ಜೀವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಮಮದಾಪುರದಲ್ಲಿರುವ 1600 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ರಾಷ್ಟ್ರದಲ್ಲಿಯೇ ಅತ್ಯುತ್ತಮವಾದ ಎಲ್ಲ ಸೌಕರ್ಯಗಳನ್ನೊಳಗೊಂಡ ಅರಣ್ಯ ಪ್ರದೇಶ ಅಭಿವೃದ್ದಿಪಡಿಸಿ, ಸಾಯಿನ್ಸ್ ಮ್ಯೂಸಿಯಂ, ಮಕ್ಕಳ ಚಟುವಟಿಕೆಗಾಗಿ ಪ್ರತ್ಯೇಕ ತಾಣ ಸೇರಿದಂತೆ ಸುಂದರವಾದ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಲಾಗುವುದು. ಈ ಅರಣ್ಯ ಪ್ರದೇಶವನ್ನು ಪ್ರಕೃತಿ-ನಿಸರ್ಗ ಪ್ರೇಮಿ ಸಿದ್ದೇಶ್ವರ ಶ್ರೀಗಳಿಗೆ ಅರ್ಪಣೆ ಮಾಡಲಾಗುತ್ತಿದೆ. ಪ್ರಕೃತಿಯಿಂದ ಬಂದಿದ್ದೇನೆ, ನಿಸರ್ಗದಲ್ಲಿ ವಿಲೀನವಾಗಬೇಕೆಂಬ ಸಿದ್ದೇಶ್ವರ ಶ್ರೀಗಳ ಆಶಯಕ್ಕನುಗುಣವಾಗಿ ಶ್ರೀಗಳನ್ನು ಪ್ರಕೃತಿಯಲ್ಲಿ ಕಾಣುವ ನಿಟ್ಟಿನಲ್ಲಿ ಸ್ವಚ್ಛ ಸುಂದರ ಪ್ರಕೃತಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ದೇವರೆಗೆಣ್ಣೂರದಿಂದ ಕೊಡಬಾಗಿ ಕ್ರಾಸ್ 6 ಕಿ.ಮೀ. ರಸ್ತೆಗೆ 9 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕಂಬಾಗಿ-ಮಮದಾಪುರ 6 ಕಿ.ಮೀ. ರಸ್ತಗೆ 8 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೊಡಬಾಗಿ-ಜೈನಾಪುರ ವ್ಹಾಯಾ ಮಂಗಳೂರ 5 ಕಿ.ಮೀ. ಹಳೆ ಜೈನಾಪುರದಿಂದ ಜೈನಾಪುರ 3 ಕಿ.ಮೀ. ರಸ್ತೆ 4.50 ಕೋಟಿ ರೂ. ವೆಚ್ಚ ಮಾಡಲಾಗಿದೆ. ಶೇಗುಣಸಿ-ಮಮದಾಪುರ 9.5 ಕಿ.ಮೀ. ರಸ್ತೆ 15 ಕೋಟಿ ರೂ. ವೆಚ್ಚ ಮಾಡಿ ಅಭಿವೃದ್ದಿ ಪಡಿಸಲಾಗಿದೆ. ಶೇಗುಣಸಿಯಿಂದ ಮದಗುಣಕಿ 5 ಕಿ.ಮೀ. ರಸ್ತೆಗೆ 4 ಕೋಟಿ ರೂ. ವೆಚ್ಚದ ಕಾಮಗಾರಿ ಅನುಮತಿ ದೊರೆತಿದ್ದು, ಬಹುತೇಕ ಎಲ್ಲ ಕಾರ್ಯಗಳನ್ನು ಈ ಭಾಗದಲ್ಲಿ ಮಾಡಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟಬುಕ್‍ಗಳನ್ನು ವಿತರಿಸಲಾಯಿತು. ಮಮದಾಪುರ ವಿರಕ್ತಮಠದ ಪರಮಪೂಜ್ಯ ಅಭಿನವ ಮುರುಘೇಂದ್ರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.
ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷÀ ಸಂಗಮೇಶ ಬಬಲೇಶ್ವರ, ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಗಂಗೂರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸಿ.ಬಿ. ಚಿಕ್ಕಲಕಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.