ಗ್ರಾಮೀಣ ಕಲಾವಿದರು ರಾಜ್ಯದಾದ್ಯಂತ ಹೆಸರು ಗಳಿಸುವಂತಾಗಲಿ:ಅಬ್ದುಲ್ ಸಾಬ್
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.09: ನಾಟಕ ರಂಗ ಎಂದಿಗೂ ಉಳಿದಿರುವುದು ಗ್ರಾಮಸ್ಥ ಕಲಾವಿದರಿಂದ, ನಾಡಿನ ಮಹಾ ನಗರಗಳಲ್ಲಿ ಮಾತ್ರ ನಡೆಯುವ ನಾಟಕಗಳ ಪ್ರದರ್ಶನ ಇಂದು ಕಪ್ಪಗಲ್ಲಿನಂಥ ಗ್ರಾಮೀಣ ಪ್ರದೇಶದಲ್ಲಿ ರಂಗತೋರಣ ಮಾಡುತ್ತಿದ್ದು, ಗ್ರಾಮೀಣ ಕಲಾವಿದರೂ ಇಂತಹ ಅಭಿನಯ ಕಲೆಯನ್ನು ಮೈಗೂಡಿಸಿಕೊಂಡು ರಾಜ್ಯಮಟ್ಟದಲ್ಲಿ ಹೆಸರುಗಳಿಸುವಂತಾಗಬೇಕು ಎಂದು ಬಿ.ವಿ.ಕಾರಂತ ಪ್ರಶಸ್ತಿ ಪುರಸ್ಕೃತ ಪಿ. ಅಬ್ದುಲ್‍ಸಾಬ ನುಡಿದರು.
ಅವರು ದಿನಾಂಕ 07.09.2024 ರಂದು ಕಪ್ಪಗಲ್ಲು ನಾಟಕೋತ್ಸವದ ಮೂರನೇ ದಿನ ನಾಟಕ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇನ್ನೋರ್ವ ಅತಿಥಿ ಬಳ್ಳಾರಿಯ ಉದ್ದಿಮೆದಾರ ಹಾಗೂ ವಿ.ಕೃ.ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ದಾದಾಖಲಂದರ್ ಮಾತನಾಡಿ, ಗದುಗಿನ ಪುಟ್ಟರಾಜ ಅಜ್ಜವರ ಜನರ ಭಕ್ತಿ ಪರಂಪರೆಯ ಸಾರ್ಥಕತೆಯನ್ನು ಬಿಂಬಿಸುವ ಈ ನಾಟಕ 50 ವರ್ಷಗಳ ಹಿಂದೆಯೂ ವರ್ಷಾನುಗಟ್ಟಲೆ ತುಂಬಿದ ನಾಟಕ ಗೃಹಗಳಲ್ಲಿ ನಡೆಯುತ್ತಿತ್ತು. ಅಂತಹ ನಾಟಕವನ್ನು ಈ ವರ್ಷದ ಗಣೇಶ ಹಬ್ಬದ ದಿನವೇ ರಂಗತೋರಣ ನಿಮಗೆ ತೋರಿಸುತ್ತಿದ್ದದು ಸೌಭಾಗ್ಯವೆಂದು ಅವರು ಹೇಳಿದರು. ಕರ್ನಾಟಕ ಬಯಲಾಟ ಆಕಾಡೆಮಿಯ ಮಾಜಿ ಸದಸ್ಯ ಮುದ್ದಟನೂರು ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ನಾಟಕ ಪ್ರದರ್ಶನಕ್ಕಿಂತ ಮೊದಲು ಚಿಗುರು ಜಾನಪದ ಕಲಾ ತಂಡದಿಂದ ಕಲಾತ್ಮಕ ಜಾನಪದ ಗೀತೆಗಳ ನಾಟಕೀಯ ಪ್ರಸ್ತುತಿಯನ್ನು ಜನರು ಚಪ್ಪಾಳೆಗಳ ಮೂಲಕ ಆನಂದಿಸಿದರು.
ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರಾರಂಭದಿಂದಲೂ ಜಿಟಿ ಜಿಟಿ ಮಳೆ ಹನಿಯುತ್ತಿದ್ದರೂ ಕಪ್ಪಗಲ್ಲಿನ ಜನತೆ ಟವೆಲ್ ತಲೆಗೆ ಹಾಕಿಕೊಂಡು ನಾಟಕ ವೀಕ್ಷಿಸಿದ್ದು ನಾಟಕ ಕಲಾವಿದರನ್ನೂ ಹುರಿದುಂಬಿಸಿದೆ. ನಿವೃತ್ತ ಪ್ರಾಂಶುಪಾಲ ಮೆಹತಾಬ್ ಸ್ವಾಗತ, ಚಂದ್ರಶೇಖರ್ ಆಚಾರ್ ನಿರೂಪಣೆ, ಅನಿಲ ಕುಮಾರ ವಂದಿಸಿದರು.