ಸೆ. 15 ರಂದು ರಾಜ್ಯಾದ್ಯಂತ ಪ್ರಜಾಪ್ರಭುತ್ವ ದಿನಾಚರಣೆ ವಿನೂತನವಾಗಿ ಆಚರಣೆ: ಸಚಿವ ಈಶ್ವರ ಬಿ. ಖಂಡ್ರೆ
ಬೀದರ, ಸೆ.9: ನಮ್ಮ ಸರಕಾರದ ತೀರ್ಮಾನದಂತೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸೆಪ್ಟೆಂಬರ್. 15 ರಂದು ಕರ್ನಾಟಕ ರಾಜ್ಯದಾದ್ಯಂತ ವಿನೂತನವಾಗಿ ಆಚರಿಸಲಾಗುವುದು ಎಂದು ಅರಣ್ಯ. ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಶನಿವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಾರಂಜಾ ಜಲಾಶಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಒಟ್ಟು 2800 ಕಿ.ಲೋ ಮೀಟರ್ ಮಾನವ ಸರಪಳಿ ರಚಿಸಲಾಗುತ್ತಿದೆ. ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಬಸವಕಲ್ಯಾಣದ ಅನುಭವ ಮಂಟಪದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿರುವುದು ವಿಶೇಷವಾಗಿದೆ. ಬಸವಕಲ್ಯಾಣದಿಂದ ನಮ್ಮ ಜಿಲ್ಲೆಯ ಗಡಿ ಹಳ್ಳಿಖೇಡ ಕೆ. ವರೆಗೆ ಒಟ್ಟು 45 ಕಿ. ಮೀಟರ್ ಆಗಲಿದ್ದು 40 ಸಾವಿರ ಜನರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಕುರಿತು ಈಗಾಗಲೇ ನಮ್ಮ ಅಧಿಕಾರಿಗಳು ಸುಮಾರು ಸಭೆಗಳನ್ನು ಮಾಡಿದ್ದಾರೆ. ಇದರಲ್ಲಿ ಜನ ಪ್ರತಿನಿಧಿಗಳು. ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು. ವಿವಿಧ ಸಂಘ- ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು. ಸರಕಾರಿ ನೌಕರರು. ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಂವಿಧಾನದ ಆಶಯದಂತೆ ಸ್ವಾತಂತ್ರ್ಯ. ಸಮಾನತೆ. ಭಾತೃತ್ವ ಮತ್ತು ವಿವಿಧತೆಯಲ್ಲಿ ಏಕತೆ ನಮ್ಮ ಸಂವಿಧಾನದ ಆಶಯಗಳನ್ನು ಅನುಷ್ಠಾನಕ್ಕೆ ತರುವದಾಗಿದೆ. ಈ ಕುರಿತು ನಮ್ಮ ಮಕ್ಕಳಿಗೆ ಜಾಗೃತಿ ಮೂಡಿಸುವದರ ಜೊತೆಗೆ ದ್ವೇಷ, ಅಸೂಯೆ ಮತ್ತು ಮತಾಂಧತೆಯನ್ನು ಹೋಗಲಾಡಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕಿದೆ ಅದಕ್ಕೆ ಪೂರಕವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸೆಪ್ಟೆಂಬರ್. 15 ರಂದು ಬೆಳಿಗ್ಗೆ 8:30 ಕ್ಕೆ ಬಸವಕಲ್ಯಾಣ ಅನುಭವ ಮಂಟಪದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 45 ಕಿ. ಮೀಟರ್ ಮಾನವ ಸರಪಳಿ ರಚಿಸುವದರ ಜೊತೆಗೆ 1 ಕಿ.ಮೀ ಉದ್ದದ ನಮ್ಮ ರಾಜ್ಯದ ಧ್ವಜ ಹಾಗೂ ರಾಷ್ಟ್ರದ ಧ್ವಜವನ್ನು ಹಿಡಿದು ಮಕ್ಕಳು ಮುನ್ನಡೆಯುವರು. ಇದರಲ್ಲಿ ಸಂವಿಧಾನದ ಪೀಠಿಕೆಯ ವಾಚನ ಇರುತ್ತದೆ ಹಾಗಾಗಿ ಬೀದರ ಜಿಲ್ಲೆಯ ಹೆಚ್ಚಿನ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್, ಹುಮನಾಬಾದ ಶಾಸಕ ಡಾ. ಸಿದ್ದಲಿಂಗಪ್ಪ ಎನ್. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಡಾ. ಎಂ.ಜಿ. ಮೂಳೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಲಾ ನಾರಾಯಣರಾವ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಬ್ಯಾಲಹಳ್ಳಿ. ಕೆ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಶೋಕ ಜಾಧವ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಸಿಂಧು ಎಚ್.ಎಸ್. ಸೇರಿದಂತೆ ಇತರರು ಉಪಸ್ಥಿತರಿದ್ದರು.