ಬಸವಾದಿ ಶರಣರ ತತ್ವಗಳು ಸಾರ್ವಕಾಲಿಕ : ಮೂಲಗೆ
ಔರಾದ್ :ಸೆ.9: ಬಸವಾದಿ ಶರಣರ ತತ್ವಗಳು ಸಾರ್ವಕಾಲಿಕ ಪ್ರಸ್ತುತವಾಗಿದ್ದು, ಅವರ ಸಿದ್ದಾಂತಗಳಲ್ಲಿ ಜಗತ್ತಿನ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರವಿದೆ. ಜೀವನ ಸಾರ್ಥಕತೆಗೆ ನಾವೆಲ್ಲ ಶರಣ ತತ್ವಗಳು ಅನುಸರಿಸುವುದು ಅಗತ್ಯ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ, ಸಾಮಾಜಿಕ ಚಿಂತಕ ಜಗನ್ನಾಥ ಮೂಲಗೆ ನುಡಿದರು.
ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಬಿ.ಎಂ ಅಮರವಾಡಿ ನೇತೃತ್ವದಲ್ಲಿ ನಡೆದ ಒಂದು ತಿಂಗಳ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಸಮಾನತೆ, ಮಹಿಳಾ ಪ್ರಾತಿನಿಧ್ಯ ಮತ್ತು ಮುಕ್ತ ಚಿಂತನೆಗಳಿಗೆ ಅವಕಾಶ ಮಾಡಿಕೊಟ್ಟ ಬಸವಣ್ಣ ಕಾಯಕ ಮತ್ತು ದಾಸೋಹ ಸಂಸ್ಕøತಿಯ ಮೂಲಕ ಶರಣ ತತ್ವ ಜಗತ್ತಿನಾದ್ಯಂತ ಬೆಳಗುವಂತೆ ಮಾಡಿದ್ದು ಕನ್ನಡ ನಾಡಿನ ಹಿರಿಮೆಯಾಗಿದೆ.ಮಹಾತ್ಮ ಬುದ್ಧ, ಯೇಸು, ಗುರುನಾನಕ್, ಸಂತ ತುಕಾರಾಮ, ಕನಕದಾಸರು ಸೇರಿದಂತೆ ಎಲ್ಲ ದಾರ್ಶನಿಕರ ವಿಚಾರಗಳು ಮಾನವೀಯತೆಯ ದ್ಯೋತಕವಾಗಿದ್ದು ಎಲ್ಲ ಧರ್ಮದ ಸಾರ ಒಂದೇಯಾಗಿದೆ ಎಂದರು.
ಸಂಪನ್ಮೂಲ ಶಿಕ್ಷಕ ಪ್ರಕಾಶ ದೇಶಮುಖ ಮಾತನಾಡಿ, ಅಲ್ಲಮ ಪ್ರಭುದೇವರ ವಚನಗಳ ಮೂಲಕ ಶರಣ ತತ್ವದ ಸಾರ ಉಣಬಡಿಸಿದ ಬಾಲಾಜಿ ಅಮರವಾಡಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸಂತ ಮಹಾತ್ಮರ ಆದರ್ಶ ಬದುಕು ನಮ್ಮ ಜೀವನದ ಆಚರಣೆಯಾಗಬೇಕು ಎಂದರು.
ಪ್ರವಚನಕಾರ ಬಿಎಂ ಅಮರವಾಡಿ ಮಾತನಾಡಿ, ಶ್ರಾವಣ ಎಂಬುದು ಈ ಮಾಸಕ್ಕೆ ಸೀಮಿತವಾಗದೇ ನಿತ್ಯವೂ ಶ್ರಾವಣವಾಗಿ ನಮ್ಮ ಬಾಳಿನ ಸಾರ್ಥಕತೆಗೆ ಮುನ್ನುಡಿ ಬರೆಯಬೇಕು. ನಾರಾಯಣಪೂರ ಗ್ರಾಮಸ್ಥರ ಪ್ರೀತಿ, ಕರುಣೆಗೆ ಮಾತುಗಳೇ ಬಾರದಂತಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಂಗೀತ ಕಲಾವಿದರು ಹಾಗೂ ಸೌಹಾರ್ದತೆ ಬಯಸುವ ಗ್ರಾಮದ ಹಿರಿಯರಿಗೆ ಗೌರವಿಸಿ ಸನ್ಮಾನಿಸಿದರು.
ಅಮರವಾಡಿಗೆ ಗ್ರಾಮಸ್ಥರಿಂದ ಸನ್ಮಾನ :
ಎಕಲಾರ ಗ್ರಾಮದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಬಿ.ಎಂ ಅಮರವಾಡಿ ಶಿಕ್ಷಣ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಸ್ತುತ ಶ್ರಾವಣಮಾಸದಲ್ಲಿ ನಿರಂತರ ಒಂದು ತಿಂಗಳ ಕಾಲ ಪ್ರವಚನಗೈದ ಅವರಿಗೆ ನಾರಾಯಣಪೂರ ಗ್ರಾಮಸ್ಥರ ವತಿಯಿಂದ, ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಗೌರವಿಸಿ ಸನ್ಮಾನಿಸಲಾಯಿತು.