ಹಳ್ಳಿಗಳಲ್ಲಿ ನಾಟಕಗಳ ಉತ್ಸವ ಪ್ರಸಂಶನೀಯ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.09: ನಮ್ಮ ನಾಡಿನ ಹಳ್ಳಿ ಹಳ್ಳಿಗಳಲ್ಲೂ ವರ್ಷಕ್ಕೊಮ್ಮೆ ಗ್ರಾಮಸ್ಥರೇ ನಾಟಕಗಳನ್ನು ಕಲಿತು ಒಂದು ದಿವಸ ಪ್ರದರ್ಶಿಸುತ್ತಾರೆ. ಈ ರೀತಿ ನಾಟಕಗಳ ಉತ್ಸವ ಯಾವ ಗ್ರಾಮಗಳಲ್ಲೂ ನಡೆದಿಲ್ಲ. ಕಪ್ಪಗಲ್ಲಿನ ಮಹಾಜನತೆಗೆ ಈ ಉತ್ಸವ ತೋರಿಸಿದ ರಂಗತೋರಣದ ಕಾರ್ಯ ಪ್ರಸಂಶನೀಯ ಎಂದು ಕೆ.ಎ. ರಾಮಲಿಂಗಪ್ಪ ಅವರು ಅಭಿಪ್ರಾಯಪಟ್ಟರು.
ಕಪ್ಪಗಲ್ಲು ಗ್ರಾಮದಲ್ಲಿ ನಡೆಯುತ್ತಿರುವ ಕಪ್ಪಗಲ್ಲು ನಾಟಕೋತ್ಸವದ ಎರಡನೇ ದಿನದ ಪ್ರದರ್ಶನವನ್ನು ಉದ್ಘಾಟಿಸಿ ಬಳ್ಳಾರಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎ. ರಾಮಲಿಂಗಪ್ಪ ಅವರು ಮಾತನಾಡುತ್ತಿದ್ದರು.
ರೈತರು, ಕೂಲಿಯವರು ಇತರೆ ಗ್ರಾಮೀಣ ವೃತ್ತಿಯಲ್ಲಿ ನಾಟಕ ಕಲಿಯುವ ಹುಮ್ಮಸ್ಸು ಬಹಳ ಇರುತ್ತದೆ. ಆದ್ದರಿಂದ ಒಂದು ಪ್ರದರ್ಶನದ ಖರ್ಚು ವೆಚ್ಚಗಳನ್ನು ಅವರೇ ಹೊಂದಿಸಿಕೊಂಡು ನಾಟಕ ಆಡಿ ಇಂದಿಗೂ ಗ್ರಾಮೀಣ ಕಲೆ ಉಳಿಸಿದ್ದಾರೆ. ಇಂತಹ ಉತ್ಸವಗಳಲ್ಲಿ ದಿನಕ್ಕೊಂದು ಬಗೆ ಬಗೆಯ ನಾಟಕಗಳನ್ನು ಅವರಿಗೆ ತೋರಿಸಿದಾಗ ಅವರಲ್ಲಿರುವ ಕಲೆಯನ್ನು ವೃದ್ಧಿಸಿದಂತಾಗುತ್ತದೆ ಎಂದ ಅವರು ರಂಗತೋರಣ ಕಳೆದ ವರ್ಷದಿಂದ ಇಂತಹ ನಾಟಕಗಳನ್ನು ಇಲ್ಲಿ ಆಯೋಜಿಸುತ್ತಿದೆ. ಪ್ರತಿ ನಾಟಕಕ್ಕೆ ಒಬ್ಬರಿಗೆ 100-150 ರೂ ಟಿಕೇಟು ನಾಟಕಗಳನ್ನು ಅಷ್ಟೇ ಭರ್ಜರಿಯಾಗಿ ದಿನವೂ ಪುಕ್ಕಟೆಯಾಗಿ ನೀವು ಇರುವಲ್ಲೇ ಬಂದು ತೋರಿಸಿ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಉಂಟು ಮಾಡಿದ್ದು ನೀವೆಲ್ಲ ಸಂತಸ ಪಟ್ಟಿರುವಿರಿ ಎಂದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎ.ಬಸವನಗೌಡ, ನಿವೃತ್ತ ಅಧಿಕಾರಿ ಬಿ.ಕಟ್ಟೇಗೌಡ, ಗ್ರಾಮದ ಮುಖಂಡರಾದ ದ್ಯಾವಣ್ಣ, ಕೋರಿಬಸಪ್ಪ, ಉಪ್ಪಾರ ಬಸವರಾಜ, ಗೋವಿಂದಪ್ಪ, ವೀರೇಶ ಹಾಗೂ ಖ್ಯಾತ ಕಲಾವಿದೆ ಪದ್ಮಶ್ರೀ ಮಂಜಮ್ಮ ಜೋಗತಿ ಅವರು ನಾಟಕ ವೀಕ್ಷಿಸಲು ಬಂದು ವೇದಿಕೆಯಲ್ಲಿದ್ದರು. ಸನ್ಮಾರ್ಗ ಕನ್ನಡ ಬಂಧು ಚಂದ್ರಶೇಖರ ಆಚಾರ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಮೆಹತಾಬ್ ಸರ್ ಕಾರ್ಯಕ್ರಮ ನಿರೂಪಿಸಿದರು. ಕಪ್ಪಗಲ್ಲು ನಾಟಕೋತ್ಸವ ಸಂಚಾಲಕ ಅನಿಲಕುಮಾರ ಅಂಗಡಿ ಇದ್ದರು.
ಕಾರ್ಯಕ್ರಮದ ನಂತರ ಗದುಗಿನ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪುಟ್ಟರಾಜ ಗವಾಯಿಗಳ ಕಂಪನಿಯಿಂದ ‘ಗಡಗಿ ಜ್ವಾಕಿ ತಂಗಿ’ ಎನ್ನುವ ಸುಂದರ ಸಾಮಾಜಿಕ ನಡೆಯಿತು. ವಿಜಯಪುರದ ಹಾನಗಲ್ ಕುಮಾರೇಶ್ವರ ನಾಟ್ಯ ಸಂಘದ ರಂಗ ಸಜ್ಜಿಕೆಯಿಂದ ನಾಟಕ ಪೂರ್ಣ ಕಳೆಗಟ್ಟಿತ್ತು. ಸ್ವಲ್ಪ ಮಳೆ ಬಂದರೂ ಜನ ಕದಲದೇ ನಾಟಕ ಪೂರ್ಣ ನೋಡಿದ ಗ್ರಾಮಸ್ಥರ ಕಲಾಭಿರುಚಿಗೆ ಸಾಕ್ಷಿಯಾಗಿತ್ತು.