ಸೆ.12ಕ್ಕೆ ರಾಜ್ಯವ್ಯಾಪಿ ಏಕಕಾಲಕ್ಕೆ ಡಿಎಸ್‌ಎಸ್‌ನಿಂದ ತಮಟೆ ಚಳುವಳಿ
ಸಂಜೆವಾಣಿ ವಾರ್ತೆ
ದಾವಣಗೆರೆ: ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯಕ್ಕೆ ಅಧಿಕಾರವಿದೆಯೆಂಬ ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಸೆ.12ರಂದು ಏಕಕಾಲಕ್ಕೆ ಬೃಹತ್ ತಮಟೆ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ತಮಟೆ ಚಳವಳಿಯ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕಿದೆಯೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಸ್ವಾಗತಾರ್ಹವಾಗಿದ್ದು, ಈ ತೀರ್ಪನ್ನು ರಾಜ್ಯ ಸರ್ಕಾರ ತಕ್ಷಣ ಅನುಷ್ಟಾನಗೊಳಿಸುವ ಮೂಲಕ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಬೇಕು ಎಂದರು.ಸುಪ್ರೀA ಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡುವ ಮೂಲಕ ಪರಿಶಿಷ್ಟ ಜಾತಿಯ ಶೋಷಿತ ಸಮುದಾಯಗಳಲ್ಲಿ ಭರವಸೆ ಮೂಡಿಸಿದೆ. ಕಳೆದ 3 ದಶಕದಿಂದಲೂ ಡಿಎಸ್ಸೆಸ್ ಕೈಗೊಂಡಿದ್ದ ಹೋರಾಟಕ್ಕೆ ಇದರಿಂದ ಜಯ ಸಿಕ್ಕಿದೆ. ಮೀಸಲಾತಿ ವ್ಯವಸ್ಥೆಯಲ್ಲಿ ಇದು ಅತ್ಯಂದ ಮುಖ್ಯವಾಗಿ, ಮಹತ್ವದ ಹೆಜ್ಜೆಯೂ ಆಗಲಿದೆ. ಹಿಂದೆ ಇದೇ ವಿಚಾರದಲ್ಲಿ ಪರಸ್ಪರ ವಿರುದ್ಧವಾದ ತೀರ್ಪುಗಳನ್ನು ನ್ಯಾಯಾಲಯಗಳು ನೀಡಿದ್ದವು. ಈಗ ಸಿಜೆಐ ಡಿ.ವೈ.ಚಂದ್ರಚೂಡರ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ವಿಚಾರದಲ್ಲಿದ್ದಂತಹ ಎಲ್ಲಾ ಗೊಂದಲಗಳನ್ನು ಪರಿಹರಿಸಿದೆ ಎಂದು  ತಿಳಿಸಿದರು.ದಾವಣಗೆರೆ ನಗರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಳೆ ಪಿಬಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಡಿಎಸ್ಸೆಸ್ ನೇತೃತ್ವದಲ್ಲಿ ಸೆ.12ರಂದು ಬೆಳಿಗ್ಗೆ 11ಗಂಟೆಯಿಂದ ಬೃಹತ್ ತಮಟೆ ಚಳವಳಿ ಕೈಗೊಳ್ಳಲಾಗಿದೆ. ಅಂದು ಡಿಎಸ್ಸೆಸ್ ನೇತೃತ್ವದಲ್ಲಿ ಮಾದಿಗ ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ತಮಟೆ ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಒಳ ಮೀಸಲಾತಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಿದ್ದಾರೆ ಎಂದು  ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಸಮಿತಿಯ ದಾವಣಗೆರೆ ತಾಲ್ಲೂಕು ಸಂಚಾಲಕ ಹನುಮಂತಪ್ಪ ಅಣಜಿ, ಹರಿಹರ ಸಂಚಾಲಕ ಪಿ.ಜೆ.ಮಹಾಂತೇಶ, ಜಿಲ್ಲಾ ಸಂಘಟನಾ ಸಂಚಾಲಕರಾದ  ಹನುಮಂತಪ್ಪ ಬೇತೂರು, , ತಾಲ್ಲೂಕು ಸಂಘಟನಾ ಸಂಚಾಲಕರಾದ ನಾಗರಾಜ ಬಿ.ಚಿತ್ತಾನಹಳ್ಳಿ, ಮಹಿಳಾ ಸಂಚಾಲಕರಾದ ಕೆ.ವಿಜಯಲಕ್ಷ್ಮಿ ಉಪಸ್ಥಿತರಿದ್ದರು.