ಪಾಲನೆಯಾಗದ ಗುರುತಿನ ಚೀಟಿ ಆದೇಶ: ದೂರು
ಬೀದರ್: ಸೆ.9:ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಭಿಯಾನದಡಿ ಎಲ್ಲ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರ ಧರಿಸುವಂತೆ ಸರ್ಕಾರ ಹೊರಡಿಸಿರುವ ಆದೇಶ ಜಿಲ್ಲೆಯಲ್ಲಿ ಪಾಲನೆಯಾಗುತ್ತಿಲ್ಲ ಎಂದು ನಮ್ಮ ಕರ್ನಾಟಕ ಸೇನೆ ಆರೋಪಿಸಿದೆ.
ಸೇನೆಯ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ನೇತೃತ್ವದಲ್ಲಿ ನಗರದಲ್ಲಿ ಈಚೆಗೆ ನಿಯೋಗದಲ್ಲಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಗುರುತಿನ ಚೀಟಿ ಕೊರಳುದಾರ ಧರಿಸಬೇಕು. ಕಚೇರಿಗೆ ಸಮಯಕ್ಕೆ ಸರಿಯಾಗಿ ಬಾರದ ನೌಕರರ ವಿರುದ್ಧ ಕ್ರಮ ಜರುಗಿಸಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ಯಂತ್ರ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜಕುಮಾರ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಂಜು ಯಾದವ್, ಗಿರೀಶ್ ಬಿರಾದಾರ, ಸಂತೋಷ ಪಾಟೀಲ, ದತ್ತು ಗಿರಿ, ಅನಿಲ್ ರಾಜಗೀರಾ, ರಾಮಶೆಟ್ಟಿ ಹುಣಜೆ, ಸೋಮನಾಥ ಪಾಟೀಲ, ಸೂರ್ಯಕಾಂತ ಪಾಟೀಲ, ಬಸವರಾಜ ಕಾರಬಾರಿ, ರಾಜಕುಮಾರ ಕೋಟೆ ಮತ್ತಿತರರು ಇದ್ದರು.