ಶ್ರಾವಣ ಮಾಸದ ಮುಕ್ತಾಯ ಸಮಾರಂಭ
ಕಲಬುರಗಿ:ಸೆ.9: ಹಿಂದುಳಿದ ಬಣಗಾರ ಸಮಾಜವನ್ನು ಹಿಂದುಳಿದ 2ಎಗೆ ಸೇರಿಸುವುದು, ಸಮುದಾಯ ಭವನ ನಿರ್ಮಾಣ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಸರಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ತಾವು ಪ್ರಯತ್ನಿಸುವುದಾಗಿ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಗರದ ಮಕ್ತಂಪುರದಲ್ಲಿನ ಶ್ರೀ ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಭಾನುವಾರದಂದು ಜಿಲ್ಲಾ ಬಣಗಾರ ಸಮಾಜ ಹಾಗೂ ಶ್ರೀ ಜಡೆ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಶ್ರೀ ಗುಡ್ಡಾಪುರ ವರದಾನೇಶ್ವರಿ ಪುರಾಣ ಪ್ರವಚನ ಮಹಾಮಂಗಳ, ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರುದ್ರಭೂಮಿ ಮಂಜೂರು ಮಾಡಿಸಲು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆಯೂ ಚರ್ಚಿಸುವುದಾಗಿ ಅವರು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಮಕ್ತಂಪುರ ಬೃಹ್ನಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರಾವಣ ಮಾಸ ಪವಿತ್ರವಾದದದ್ದು. ಸಾಂಸಾರಿಕ ಜಂಜಡದಿಂದ ಮುಕ್ತರಾಗಿ ದೇವರ ನಾಮಸ್ಮರಣೆ ಮಾಡುವ ಮಾಸವಾಗಿದೆ. ಭಕ್ತಿಯಿಂದ ಆಚರಣೆ ಮಾಡಿದರೆ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಸಮಾಜ ಬೆಳೆಯಲು ಧರ್ಮಾಚರಣೆಗಳು ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ಬಣಗಾರ ಸಮಾಜದ ಕೊಡುಗೆ ಅಪಾರವಾಗಿದೆ. ಸರಕಾರದ ಅನುದಾನವಿಲ್ಲದೆ ಸಮಾಜದ, ದೇವಸ್ಥಾನದ ಅಭಿವೃದ್ಧಿಗೆ ಸಮಾಜದ ಹಿರಿಯರು, ಬಾಂಧವರು ಸಾಕಷ್ಟು ಶ್ರಮಿಸಿದ್ದನ್ನು ಶ್ಲಾಘನೀಯ ಎಂದರು.
ಮಹಾನಗರ ಪಾಲಿಕೆ ಸದಸ್ಯ ವಿಜಯಕುಮಾರ ಸೇವಲಾನಿ, ಅಪ್ಪು ಕಣಿಕಿ ಅವರು ಪಾಲ್ಗೊಂಡಿದ್ದರು. ಶ್ರೀ ಜಡೆಶಂಕರಲಿಂಗ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷ ಆನಂದ ದಂಡೋತಿ ಸ್ವಾಗತಿಸಿದರು. ಬಣಗಾರ ಸಮಾಜದ ಅಧ್ಯಕ್ಷ ಶಾಂತಪ್ಪ ಘೂಳಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಧನಶೆಟ್ಟಿ, ಸಮಾಜದ ಪ್ರಧಾನ ಕಾರ್ಯದರ್ಶಿ ಸುರೇಶ ಉಡಚಣ, ನಾಗೇಶ ಹಂಪಾಗೋಳ್, ಬಸವರಾಜ ಕಮರಡಗಿ, ನಾಗೇಂದ್ರ ಕಲ್ಯಾಣಿ, ರಾಜು ಬೈರಾಮಡಗಿ, ಸಂತೋಷ ನಂದಿ, ರಾಜು ಕಲ್ಯಾಣಿ, ಮಲ್ಲಿಕಾರ್ಜುನ ದೊಡಕುಂಡಿ, ಪ್ರವೀಣ ನಂದಿ, ಬಸವರಾಜ ಮುಗಳಿ, ರವೀಂದ್ರ ಕಾಳಗಿ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ದಾನಿಗಳಿಗೆ ಸತ್ಕರಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಬಣಗಾರ ಕೊಡುಗೆ ಅಪಾರ
ಸ್ವಾತಂತ್ರ್ಯ ಹೋರಾಟದಲ್ಲಿ ಬಣಗಾರ ಸಮಾಜದವರ ಕೊಡುಗೆ ಅಪಾರವಾಗಿದೆ. ಸೋಲಾಪುರದಲ್ಲಿ ಬ್ರೀಟಿಷರ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಲ್ಲಪ್ಪ ಧನಶೆಟ್ಟಿ ಎಂಬುವರನ್ನು ಬ್ರೀಟಿಷರು ಗಲ್ಲಿಗೆರಿಸಿದರು. ಅವರ ಹೆಸರಿನಲ್ಲಿ ಕೇಂದ್ರ ಸರಕಾರ ಅಂಚೆ ಚೀಟಿ ಹೊರತಂದು ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಇದು ಬಣಗಾರ ಸಮಾಜದವರು ಹೆಮ್ಮೆ ಪಡುವಂತಹ ವಿಷಯವಾಗಿದೆ.
-ಶ್ರೀ ಚರಲಿಂಗ ಮಹಾಸ್ವಾಮಿಗಳು
ಗದ್ದುಗೆ ಮಠ, ಕಲಬುರಗಿ