ಭಜನೆ ಜನ್ಮಾಂತರ ಮುಕ್ತಿಗೆ ಮಾರ್ಗ: ಹಾರಕೂಡ ಶ್ರೀಗಳು
ಬಸವಕಲ್ಯಾಣ: ಸೆ.9:ಸೃಷ್ಟಿಕರ್ತನನ್ನು ವೈರಾಗ್ಯ ಭಾವದಿಂದ ಭಜಿಸುವುದರಿಂದ, ಭಜನೆಯನ್ನು ಕಾಯಕದಲ್ಲಿ ಇಳಿಸುವುದರಿಂದ, ಕಾಯಕವೇ ಭಜನೆಯಾಗಿ ರೂಪಾಂತರಿಸುವುದರಿಂದ, ಮನುಷ್ಯ ಜನನ ಮರಣಗಳ ಜನ್ಮಾಂತರ ಬಂಧನದಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ ಎಂದು ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಘೋಗ್ಗ ಗ್ರಾಮದಲ್ಲಿ ಆಯೋಜಿಸಿದ ಅಖಂಡ ಪರಿಣಾಮ ಸಪ್ತಾಹ ಸಮಾರಂಭದ ಪಾವನ ಸನ್ನಿಧಾನವಹಿಸಿ ದಿವ್ಯ ವಾಣಿ ಕರುಣಿಸಿದ ಶ್ರೀಗಳು, ಭವದ ಜನರೆಲ್ಲರೂ ನನ್ನವರು, ಎಲ್ಲರ ಹೃದಯದಲ್ಲಿಯೂ ಹರಿಹರನ ನೆಲೆ ಇದೆ, ಜನ್ಮ ಜನ್ಮಾಂತರದ ಗೋಜು ನನಗೆ ಬೇಡ ಈ ಜನ್ಮದಲ್ಲಿಯೇ ಮುಕ್ತಿ ಕರುಣಿಸು ಎಂದು ಪ್ರತಿನಿತ್ಯ ವಿನೀತನಾಗಿ ಪ್ರಾರ್ಥಿಸುತ್ತಾ ಸಾತ್ವಿಕ ಬದುಕು ಸಾಗಿಸುತ್ತಿರಬೇಕು.
ಮನುಷ್ಯ ಮಲ್ಲಿಗೆಯಾಗಿಸಿಕೊಂಡು ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡವರ ಮನೆಯಲ್ಲಿ ಪುಣ್ಯದ ಗಂಟು ಅಕ್ಷಯವಾಗುತ್ತಿರುತ್ತದೆ.
ದೇವರ ಮನೆ ಇದು ಈ ಜಗವೆಲ್ಲ ಬಾಡಿಗೆದಾರರು ನಾವೆಲ್ಲ, ಇಲ್ಲಿಗೆ ಅತಿಥಿಯಾಗಿ ಬಂದ ನಾವು ಅತಿಥಿಯಾಗಿಯೇ ತೆರಳಬೇಕು.
ಪೂಜಿಸುವ ಆರಾಧಿಸುವ ಮೂರ್ತರೂಪಗಳು ಬೇರೆ ಬೇರೆಯಾದರೂ ಆ ಮೂರ್ತವಾದ ದೈವ ಸ್ವರೂಪ ಒಂದೆ ಎನ್ನುವುದನ್ನು ಅರಿತಿರಬೇಕು.
ಮನುಷ್ಯನ ಮಾತು ಮೌನವಾದಾಗ ಹೂವು ಮಾತಾಡುತ್ತದೆ ಎಂದು ತಿಳಿಸಿದ ಶ್ರೀಗಳು ಕೋಟಿ ಜಪ ತಪ ಮಾಡಿದರು ಮನುಪುಷ್ಪದ ಅರಿವಿಕೆಗೆ ಸಂತ ಮಹಾಂತರ ಪಾದ ಸ್ಪರ್ಶ ಹಾಗೂ ಅವರ ಒಂದು ಭಾಸ್ಕರ ಸಂದೇಶದ ಹರಿವು ಬೇಕಾಗುತ್ತದೆ.
ಸತತವಾಗಿ 24 ವರ್ಷಗಳಿಂದ ನಮ್ಮನ್ನು ಭಕ್ತಿ ಶ್ರದ್ಧೆಯಿಂದ ಬರಮಾಡಿಕೊಂಡು ಅಖಂಡ ಅಖಂಡ ಹರಿನಾಮ ಸಪ್ತಾಹವನ್ನು ಆಯೋಜಿಸುತ್ತಿರುವ ಘೋಗ್ಗ ಗ್ರಾಮದ ಹರಿನಿಷ್ಠೆ ಮಾದರಿಯಾಗಿದೆ.
ಔಸಾ ಸಂಸ್ಥಾನಕ್ಕೂ ಹಾರಕೂಡ ಮಠಕ್ಕೂ ಬಲವಾದ ಅಧ್ಯಾತ್ಮದ ನಂಟು ಇದ್ದು, ಹರಿಹರ ಒಂದು ಎಂಬ ಐಕ್ಯ ಸಂದೇಶ ಸಾರುವ ಗ್ರಾಮವೇ ಘೋಗ್ಗ ಗ್ರಾಮ ವಾಗಿದೆ.
ಸರ್ವರಿಗೂ ಸನ್ಮಂಗಳ ವಾಗಲಿ ಹಾರಕೂಡ ಚನ್ನಬಸವ ಶಿವಯೋಗಿಗಳ ಶಿವಗಂಗೆ ಎಲ್ಲರ ಮನ ತಣಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹುಮನಾಬಾದ ಶಾಸಕ ಸಿದ್ದಲಿಂಗ ಪಾಟೀಲಮಾತನಾಡಿದರು.
ಸಾಯಿಬಣ್ಣ ಪೂಜಾರಿ, ಪ್ರಕಾಶ ಮತ್ರೆ, ಮಾಳಪ್ಪ ನಾರಾಯಣಪುರೆ ಮಾತನಾಡಿದರು.
ಸಂತೋಷ ಸೀಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜೋಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನುಷಾಬಾಯಿ ಬಂಡುನೋರ, ಪ್ರದೀಪ್ ಬೇಂದ್ರೆ, ವಿನಾಯಕ ಮಲ್ಕೊಜಿ, ಸಿದ್ರಾಮ ಕವಳೆ, ಶಿವಕುಮಾರ ಘಾಳೆ ಮುಂತಾದವರು ಉಪಸ್ಥಿತರಿದ್ದರು.
ವಿನೋದ ಮತ್ರೆ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಮೊದಲು ಗ್ರಾಮಕ್ಕೆ ಆಗಮಿಸಿದ ಹಾರಕೂಡ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.