ಅನ್ನಕ್ಕಾಗಿ ಹಂಬಲಿಸಿದ ಜನಗಳ ದೃಶ್ಯಕಾವ್ಯ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.09:– ಅನ್ನ ಚಲನಚಿತ್ರವೂ ಅನ್ನಕ್ಕಾಗಿ ಹಂಬಲಿಸಿದ ಜನಗಳ ದೃಶ್ಯಕಾವ್ಯ ಎಂದು ಗಾಂಧಿನಗರ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಲನಚಿತ್ರ ವೀಕ್ಷಿಸಿ ಮಾತನಾಡಿದ ಅವರು, ಈ ಚಿತ್ರ ಭಾರತೀಯ ಚಿತ್ರರಂಗದ ಪರಂಪರೆಯಲ್ಲಿ ಐತಿಹಾಸಿಕ ದಾಖಲೆಯಾಗಿ ಉಳಿಯುತ್ತದೆ ಎಂದು ನುಡಿದರು.
40 ವರ್ಷಗಳ ಹಿಂದೆ ಅನ್ನಕ್ಕಾಗಿ ಏನೆಲ್ಲಾ ಜರುಗಿತು ಮತ್ತು ಶೋಷಿತ ಸಮದಾಯ ಪಟ್ಟ ಬಗೆ ಬಗೆಯ ಸನ್ನಿವೇಶಗಳನ್ನು ಚಿತ್ರದಲ್ಲಿ ಆರ್ದ್ರತೆಯಿಂದ ಚಿತ್ರೀಕರಿಸಲಾಗಿದೆ ಎಂದರು.
ಮೈಸೂರಿನ ಪ್ರತಿಭಾನ್ವಿತ ಯುವ ಕಲಾವಿದರು ಸೇರಿ ಬಹಳ ಶ್ರಮ ಮತ್ತು ಶ್ರದ್ಧೆಯಿಂದ ನಿರ್ಮಿಸಿರುವ ಈ ಚಿತ್ರ ಆಶಯ ಮತ್ತು ಪ್ರಯೋಗಾತ್ಮಕ ನೆಲೆಯಿಂದ ಮಹತ್ವದ ಕೃತಿ ಎಂದು ನುಡಿದರು.
ಶೋಷಿತ ಜನಗಳು ಹಸಿವಿನ ವಿರುದ್ಧ ಹೋರಾಟ ಮಾಡಿದರು. ಜೋಳ, ರಾಗಿ, ಸೊಪ್ಪು ತಿಂದು ಬದುಕುಳಿದರು. ಹಬ್ಬಗಳಲ್ಲಿ ಮಾತ್ರ ಸಿಗುತ್ತಿದ್ದ ಅನ್ನ ಗಗನಕುಸುಮವಾಗಿತ್ತು ಎಂದು ಹೇಳಿದರು.
ಸರ್ವಕ್ಕೂ ಅನ್ನವೇ ಕಾರಣ ಅನ್ನುವ ಮಹಾದಾಸೆಯನ್ನು ಚಿತ್ರತಂಡ ಸುಂದರವಾಗಿ ರೋಚಕವಾಗಿ ಎಳೆ ಎಳೆಯಾಗಿ ನಿರೂಪಿಸಿದೆ. ಅನ್ನದಿಂದ ವಂಚಿತರಾದ ಶೋಷಿತರು ವಿದ್ಯಾಭ್ಯಾಸದ ವೇಳೆ ಹಸಿವು ನೀಗಿಸಿಕೊಳ್ಳಲು ಪಟ್ಟ ಪರಿಶ್ರಮ ಚಿತ್ರದಲ್ಲಿ ಹೊರಹೊಮ್ಮಿದೆ ಎಂದರು.
ಗ್ರಾಮ್ಯ ಭಾಷೆ, ಕಲಾವಿದರ ಮನೋಜ್ಞ ಅಭಿನಯದಿಂದ ಈ ಚಿತ್ರವೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಚಿತ್ರವೂ ನೋಡುಗರ ಮನಕಲಕುತ್ತದೆ. ಅದ್ಭುತವಾದ ಯಶಸ್ಸು ಪಡೆಯಲೆಂದು ಶುಭ ಹಾರೈಸುತ್ತಾನೆ ಎಂದರು.
ನಿರ್ಮಾಪಕರಾದ ಬಸವರಾಜು, ಕಥೆಗಾರರಾದ ಹನೂರು ಚನ್ನಪ್ಪ, ಸಂಭಾಷಣೆಕಾರ ಬಿ.ಎನ್.ಸಿದ್ದುಪ್ರಸನ್ನ, ನಟಿ ಪದ್ಮಶ್ರೀ, ಕಲಾ ನಿರ್ದೇಶಕ ಮಹೇಶ್ವರ ಎನ್, ಸಹಾಯಕ ನಿರ್ದೇಶಕ ಮೊಹಮ್ಮದ್ ಸಿದ್ದಿಖ್ ಮುಂತಾದವರು ಉಪಸ್ಥಿತರಿದ್ದರು.