ಶಿಕ್ಷಕರ ದಿನಾಚರಣೆ
ಬಾಗಲಕೋಟ, ಸೆ9: ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್. ಆರ್. ನರಸಾಪೂರ ಕಲಾ ಮತ್ತು ಎಂ. ಬಿ ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಸಸಿಗಳನ್ನು ನೀಡುವುದರ ಮೂಲಕ ವಿಶಿಷ್ಟವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು. ತಮ್ಮನ್ನು ಬೆಳೆಸಿದ ಹಾಗಿಯೇ ಈ ಸಸಿಗಳನ್ನು ಬೆಳೆಸಿ ಪರಿಸರ ರಕ್ಷಣೆಗೆ ಕೈಜೋಡಿಸಲು ಮನವಿ ಮಾಡಿದರು. ಈ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗಾಗಿ ತಾವು ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿ, ಡಾ. ಎಸ್ ರಾಧಾಕೃಷ್ಣನ್ನರ ಬದುಕು-ಬರಹ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಶ್ರೀನಿವಾಸ ನರಗುಂದ ವಿದ್ಯಾರ್ಥಿಗಳ ಶ್ರೇಯಾಭಿವೃದ್ದಿ ಬಯಸುವ ಶಿಕ್ಷಕ ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ.
ಶಿಕ್ಷಕನಿಗೆ ವಿದ್ಯಾರ್ಥಿಗಳೇ ನಿಜವಾದ ಆಸ್ತಿ, ಅಜ್ಞಾನದ ಕತ್ತಲೆ ನೀಗಿ, ಜ್ಞಾನದ ಬೆಳಕನ್ನು ನೀಡಿ, ಅವರ ಭವಿಷ್ಯವನ್ನು ಶಿಕ್ಷಕರು ರೂಪಿಸುತ್ತಾರೆ ಎಂದರು.
ಪಾಲಕರು ತರುವಾಯ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವವರೆ ಶಿಕ್ಷಕರು ಅವರಲ್ಲಿ ಜೀವನ ಮೌಲ್ಯಗಳ ಬೀಜ ಬಿತ್ತುವ ಶೈಕ್ಷಣಿಕ ಕೃಷಿಕನೇ ಶಿಕ್ಷಕ. ವಿದ್ಯಾರ್ಥಿಗಳ ಸಾಧನೆಗೆ ಸ್ವತ: ಸಂತಸ ಪಡುವ ಹೃದಯ ಶ್ರೀಮಂತಿಕೆ ಶಿಕ್ಷಕರಿಗಿದೆ ಎಂದು ಬಣ್ಣಿಸಿದರು.
ವಿದ್ಯಾರ್ಥಿಗಳು ಗುರುವಿನ ಬಗ್ಗೆ ಪ್ರೀತಿ-ಗೌರವ ಅಭಿಮಾನವನ್ನು ಬೆಳೆಸಿಕೊಂಡು ಅವರ ಮಾರ್ಗದರ್ಶನದಲ್ಲಿ ಸಾಗಿ ಜೀವನದಲ್ಲಿ ಯಶ ಪಡೆಯಬೇಕು. ಡಾ. ಎಸ್.ರಾಧಾಕೃಷ್ಣನ್‍ರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜೊತೆಗೆ ಶಿಕ್ಷಕರು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಾದ ಆಸ್ಮಾ ಕಂದಗಲ್, ಶ್ರುತಿ ನಾಯಕ ಹಾಗೂ ಚಂದ್ರಶೇಖರ ಹಿರ್ಲವರ ಮಾತನಾಡಿದರು. ಶ್ರೇಯಾ ಮುತ್ತತ್ತಿ ಪ್ರಾರ್ಥಿಸಿದರು, ಪಲ್ಲವಿ ಗೌಡರ ಸ್ವಾಗತಿಸಿದರು. ಸುಷ್ಮಾ ದೇಸಾಯಿ ವಂದಿಸಿದರು. ಮೀನಾಕ್ಷಿ ಮನಗೂಳಿ ನಿರೂಪಿಸಿದರು. ಉಪನ್ಯಾಸಕರಾದ ಎಸ್,ವಾಯ್.ಬೊಮ್ಮಣ್ಣವರ, ಎಂ.ಡಿ. ಕೋರವಾರ, ಎಂ.ಕೆ.ಗುಡೂರ, ಕೆ.ಎಸ್.ದಾಸರ, ಎಸ್,ಎಸ್, ಕುಲಕರ್ಣಿ ಇದ್ದರು.