ಒಳಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ಆರ್ ಪಿಐ ಪ್ರತಿಭಟನೆ
ಬೆಂಗಳೂರು, ಸೆ. ೯- ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿ ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ಆರ್‌ಪಿಐ (ಬಿ) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ. ಎನ್. ಮೂರ್ತಿ ಅವರ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮುಖಾಂತರ ಆಯಾಯ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎನ್. ಮೂರ್ತಿಯವರು ತಿಳಿಸಿದರು.
ಪರಿಶಿಷ್ಟ ಜನಾಂಗದ ೧೦೧ ಜಾತಿ ಹಾಗೂ ಉಪಜಾತಿಗಳಲ್ಲಿ ಮೀಸಲಾತಿಯ ಸೌಲಭ್ಯ ಸಮನಾಗಿ ಹಂಚಿಕೆಯಾಗಿಲ್ಲ. ಹಾಗಾಗಿ ೩ ದಶಕಗಳಿಂದ ರಾಜ್ಯಾದ್ಯಂತ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಈ ಹೋರಾಟದ ಸನ್ನಿವೇಶದಲ್ಲಿ ಹಲವಾರು ಹೋರಾಟಗಾರರು ಜೀವ, ಜೀವನ ಹಾಗೂ ಬದುಕನ್ನೇ ಕಳೆದುಕೊಂಡಿದ್ದು,
ಮೀಸಲಾತಿ ಸೌಲಭ್ಯಗಳು ಪರಿಶಿಷ್ಟ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ, ಪರಿಶಿಷ್ಟ ಜಾತಿಗಳಲ್ಲಿ ಅಸ್ಪೃಶ್ಯತೆ ಕೆಳ ಸಮುದಾಯಗಳಾದ ಇತರೇ ಉಪಜಾತಿಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಸಮುದಾಯಗಳು ಸಹಸ್ರಾರು ವರ್ಷಗಳಿಂದ ತೀರ ಹಿಂದುಳಿದಿದ್ದು, ಅಸ್ಪೃಶ್ಯತೆ, ನಿರುದ್ಯೋಗ, ಬಡತನದ ಬೇಗೆಯಲ್ಲಿ ಬೆಂದು ಬಸವಳಿದಿದ್ದಾರೆ. ಸಂವಿಧಾನದ ಆಶಯದ ಸಾಮಾಜಿಕ ನ್ಯಾಯದಿಂದ ವಂಚಿತವಾಗಿದೆ ಎಂದು ಹೇಳಿದರು.
ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡಲು ಕರ್ನಾಟಕ, ಆಂಧ್ರ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಹೋರಾಟಗಳ ಹಿನ್ನಲೆಯಲ್ಲಿ ಹಲವು ರಾಜ್ಯ ಸರ್ಕಾರಗಳು ರಚಿಸಿದ ಹಲವಾರು ಆಯೋಗಗಳು ನೀಡಿದ ವರದಿಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟಿನ ೭ ನ್ಯಾಯಾಧೀಶರ ಸಂವಿಧಾನ ಪೀಠ ದಿನಾಂಕ: ೧.೦೮.೨೦೨೪ ರಂದು ಐತಿಹಾಸಿಕ ತೀರ್ಪು ನೀಡಿದೆ.
ಈ ಕೂಡಲೆ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕೆಂದು ಅವರು ಆಗ್ರಹಿಸಿದರು. ಮತ್ತಷ್ಟು ವಿಳಂಬ ಮಾಡಿದ್ದಲ್ಲಿ ಅಕ್ಟೋಬರ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ೫ ಲಕ್ಷ ಜನ ಸೇರಿಸಿ “ವಿಧಾನಸೌಧಕ್ಕೆ”ಮುತ್ತಿಗೆ ಹಾಕಲಾಗುವುದು. ಹಾಗೂ ರಾಜ್ಯಾದ್ಯಂತ ಇಂದಿನಿಂದಲೇ ಜನಾಂದೋಲನ ಕಾರ್ಯಕ್ರಮ ನಡೆಸಲಾಗುವುದು.