ಔಷಧ ಕೊಡಲು ಬಂದ ಬಾವನ ಕೊಂದ ಭಾಮೈದ
ಬೆಂಗಳೂರು,ಸೆ.೯- ತನ್ನ ಆರೋಗ್ಯ ವಿಚಾರಿಸಲು ಮನೆಗೆ ಬಂದಿದ್ದ ಭಾಮೈದನನ್ನು ಬಾವ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದಿರುವ ದುರ್ಘಟನೆ ಬ್ಯಾಟರಾಯನಪುರದ ಹೊಸಗುಡ್ಡದ ಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.ಹೊಸಗುಡ್ಡದ ಹಳ್ಳಿಯ ವೆಂಕಟಾಚಲಪತಿ (೪೫) ಕೊಲೆಯಾದವರು, ಕೃತ್ಯ ಎಸಗಿದ ಆರೋಪಿ ವಿಶ್ವನಾಥ (೪೫)ನನ್ನು ಕಾರ್ಯಾಚರಣೆ ಕೈಗೊಂಡ ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಲ್ಲೇಶ್ವರಂನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ವಿಶ್ವನಾಥ್, ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು. ಸಹೋದರನ ಆರೋಗ್ಯದ ಕುರಿತು ಸಹೋದರಿ ಹಾಗೂ ಆಕೆಯ ಪತಿ ವೆಂಕಟಾಚಲಪತಿ ಕಾಳಜಿ ತೋರಿಸುತ್ತಿದ್ದರು.ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಾ ೧೫ ದಿನಗಳ ಹಿಂದೆ ವಿಶ್ವನಾಥ್ ಗೆ ವೆಂಕಟಾಚಲಪತಿ ಹೊಸಗುಡ್ಡದಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿದ್ದರು.
ಟಿಆರ್ ಮಿಲ್ ನಿಂದ ಅಲ್ಲಿಗೆ ರಾತ್ರಿ ೯ ಗಂಟೆ ರ ವೇಳೆ ಸಹೋದರ ವಿಶ್ವನಾಥನ ಆರೋಗ್ಯ ವಿಚಾರಿಸಿಕೊಂಡು ಔಷಧಿ ಕೊಟ್ಟು ಹೋಗಲು ಆರೋಪಿಯ ಸಹೋದರಿ ಹಾಗೂ ಬಾಮೈದ ವೆಂಕಟಾಚಲಪತಿ ಮನೆ ಬಳಿ ಬಂದಿದ್ದರು.ಮನೆಗೆ ಬಂದಿದ್ದ ಸಹೋದರಿಯ ಮೇಲೂ ದರ್ಪ ತೋರಿ ಥಳಿಸಿ ಮನೆಯಿಂದ ಹೊರದಬ್ಬಿದ್ದಾನೆ. ಇದನ್ನು ಪ್ರಶ್ನಿಸಲು ವಿಶ್ವನಾಥ್ ಮನೆಗೆ ವೆಂಕಟಾಚಲಪತಿ ಬಂದಾಗ ಚಾಕುವಿನಿಂದ ಹಲ್ಲೆ ನಡೆಸಿ ೧೦ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ. ಕೊಲೆಗೈದ ನಂತರ ಮನೆ ಹೊರಗೆ ಚಾಕು ಹಿಡಿದು ಓಡಾಡುತ್ತ ಪಕ್ಕದ ಮನೆಯವರಿಗೆ ನಮ್ಮ ಬಾವನನ್ನು ಕೊಂದಿದ್ದೇನೆ ಎಂದು ಕಿರುಚಾಡಿದ್ದಾನೆ.
ಈ ವಿಷಯ ಕಿವಿಗೆ ಬೀಳುತ್ತಿದ್ದಂತೆ ಕೂಡಲೇ ಸ್ಥಳೀಯರು ಬ್ಯಾಟರಾಯನಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ವಿಶ್ವನಾಥ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆಎಂದು ಡಿಸಿಪಿ ಗಿರೀಶ್ ತಿಳಿಸಿದರು.