ಸ್ವಯಂ ಉದ್ಯೋಗದಿಂದ ಮಹಿಳೆಯರ ಬದುಕು ಹಸನು
ಸಂಜೆವಾಣಿ ನ್ಯೂಸ್
ಮೈಸೂರು: ಸೆ.09:– ಸ್ವಯಂ ಉದ್ಯೋಗದಿಂದ ಮಹಿಳೆಯರ ಬದುಕು ಹಸನಾಗಲಿದೆ ಎಂದು ಮೈಸೂರಿನ ರುಡ್ಸೆಟ್ ಸಂಸ್ಥೆ ನಿರ್ದೇಶಕಿ ಸರಿತಾ ಅಭಿಪ್ರಾಯಪಟ್ಟರು.
ಮೈಸೂರಿನಲ್ಲಿ ಆಯೋಜಿಸಿದ್ದ ಉಂಚಿ ಉಡಾನ್ ತರಬೇತಿ ಕಾರ್ಯಕ್ರಮದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ತಮಗಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಯಂ ಉದ್ಯೋಗ ಪ್ರಾರಂಭಿಸಿದರೆ ಮಹಿಳೆಯರ ಜೀವನ ಹಸನಾಗುತ್ತದೆ. ವಾಸ್ತು ಹೌಸಿಂಗ್ ಫೈನಾನ್ಸ್, ಭಾರತ್ ಕೇರ್ಸ್ ಹಾಗೂ ಸಾಯ್ಲ್ ಫೌಂಡೇಶನ್ ಸಂಸ್ಥೆಗಳ ಸಹಯೋಗದಲ್ಲಿ ಕುಟುಂಬದ ಆರ್ಥಿಕ ನಿರ್ವಹಣೆ ಈಗ ಕೇವಲ ಪುರುಷರಿಗೆ ಸೀಮಿತವಾಗಿಲ್ಲ ಮಹಿಳೆಯರೂ ಕೂಡ ಸಮಾನ ಜವಾಬ್ದಾರಿ ಹೊರಬೇಕಾಗುತ್ತದೆ. ಅದಕ್ಕೆ ಮಹಿಳೆಯರು ಅವಶ್ಯವಿರುವ ಕೌಶಲ್ಯಗಳನ್ನು ಪಡೆದುಕೊಂಡು ಸ್ವಯಂ ಉದ್ಯೋಗ ಪ್ರಾರಂಭ ಮಾಡಿದರೆ ಸಂಪಾದನೆಯೂ ಆಗುತ್ತದೆ. ಜತೆಗೆ ಕುಟುಂಬವನ್ನು ಕೂಡ ಸುಲಭವಾಗಿ ನಿರ್ವಹಣೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಯ್ಲ್ ಫೌಂಡೇಶನ್‍ನ ನಾರಾಯಣ ಹೆಗಡೆ ಮಾತನಾಡಿ, ಉಂಚಿ ಉಡಾನ್ ಯೋಜನೆಯಡಿ 80 ಜನ ಸ್ವಯಂ ಉದ್ಯೋಗಿ ಮಹಿಳೆಯರಿಗೆ 9 ದಿನಗಳ ಕಾಲ ಉದ್ಯಮಶೀಲತಾ ತರಬೇತಿ ಆರ್ಥಿಕ ಸಾಕ್ಷರತೆ ಹಾಗೂ ತಾಂತ್ರಿಕ ಸಾಕ್ಷರತೆ ತರಬೇತಿಗಳನ್ನು ನೀಡಲಾಗಿದೆ. ನಂತರ ಅವರಲ್ಲಿ 63 ಜನರನ್ನು ಎರಡನೇ ಹಂತಕ್ಕೆ ಆಯ್ಕೆ ಮಾಡಿಕೊಂಡು ಮೂರು ದಿನಗಳ ಕಾಲ ವ್ಯವಹಾರ ಯೋಜನೆಯ ಬಗ್ಗೆ ತರಬೇತಿ ನೀಡಲಾಗಿದ್ದು, ಮುಂದಿನ ಹಂತದಲ್ಲಿ 42 ಜನರನ್ನು ಆಯ್ಕೆ ಮಾಡಿ ಅವರ ಉದ್ಯಮಕ್ಕೆ ಅವಶ್ಯವಿರುವ ಯಂತ್ರಗಳು ಹಾಗೂ ಇತರೆ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದರು.
ಈ ಸಂದರ್ಭ ಭಾರತ್ ಕೇರ್ಸ್ ಸಂಸ್ಥೆಯ ಅಧಿಕಾರಿಗಳಾದ ಪೂಜಾ, ಭಾರತಿ, ಆಶಿಶ್ ತ್ರಿಪಾಠಿ ಮಾತನಾಡಿದರು. ತರಬೇತಿ ಪಡೆದ ಎಲ್ಲಾ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.