ಶಿಕ್ಷಕರ ದಿನಾಚರಣೆ
ಬ್ಯಾಡಗಿ,ಸೆ.9: ಶಿಕ್ಷಕರ ದಿನಾಚರಣೆಯು ಶಿಕ್ಷಕರನ್ನು ಗೌರವಿಸಲು ಮತ್ತು ಶಿಕ್ಷಣಕ್ಕೆ ಅವರ ವಿಶೇಷ ಕೊಡುಗೆಗಳನ್ನು ಶ್ಲ್ಯಾಘಿಸಲು ಒಂದು ಉತ್ತಮವಾದ ದಿನವಾಗಿದ್ದು, ಡಾ ರಾಧಾಕೃಷ್ಣನ್ ಅವರ ಸವಿ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದು ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಸವರಾಜ ಹಾವೇರಿಮಠ ಹೇಳಿದರು.
ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ನವೋದಯ ವಿದ್ಯಾಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನ, ಕೌಶಲ್ಯ ಮಟ್ಟ, ಆತ್ಮವಿಶ್ವಾಸವನ್ನು ಸುಧಾರಿಸಲು ಸಹಾಯ ಮಾಡುವ ಶಿಕ್ಷಕರನ್ನು ನಾವು ಎಷ್ಟು ಸ್ಮರಿಸಿದರೂ ಸಾಲದು. ಅವರು ಎಷ್ಟು ಆಪ್ತರಾಗುತ್ತಾರೆ ಎಂದರೇ ನಮ್ಮದೇ ಕುಟುಂಬದ ಇನ್ನೊಬ್ಬ ಸದಸ್ಯರು ಎನ್ನುವ ಮಟ್ಟಿಗೆ ಅವರು ನಮಗೆ ಆತ್ಮೀಯರಾಗುತ್ತಾರೆ ಎಂದು ಸ್ಮರಿಸಿದರು.
ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ವರ್ಷಕ್ಕೊಮ್ಮೆ ಸಪ್ಟೆಂಬರ್ 5 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ವರ್ಷದ ಪ್ರತಿಯೊಂದು ದಿನವೂ ಶಿಕ್ಷಕರನ್ನು ಗೌರವಿಸುವ ಮನೋಭಾವ ಮತ್ತು ಅದರ ಅನುಕರಣೆ ಇದ್ದೇ ಇರುತ್ತದೆ. ಆದರೆ ವಿಶೇಷವಾಗಿ ಇದನ್ನು ಆಚರಿಸಲು ಸಪ್ಟೆಂಬರ್ 5 ಒಂದು ಉತ್ತಮ ದಿನವಾಗಿದೆ ಎಂದರು.
ಗ್ರಾಮದಲ್ಲಿರುವ ಬಸವರಾಜ ಬಳ್ಳಾರಿ ಪೂರ್ವ ಪ್ರಾಥಮಿಕ ಶಾಲೆ, ಶ್ರೀಮತಿ ಸಿದ್ದಮ್ಮ ಮೈಲಾರ ಪ್ರಾಥಮಿಕ ಶಾಲೆ, ಶ್ರೀಬಸಯ್ಯ ಈರಯ್ಯ ಕಳಸೂರುಮಠ ಪ್ರೌಢಶಾಲೆ ಹಾಗೂ ಶ್ರೀಮತಿ ಸುಶೀಲಮ್ಮ ಚನ್ನಬಸಯ್ಯ ಹಾವೇರಿಮಠ ಆಂಗ್ಲ ಮಾಧ್ಯಮ ಶಾಲೆಯ ಸಮಸ್ತ ಗುರು ವೃಂದದವರನ್ನು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಸರ್ವ ನಿರ್ದೇಶಕರು ಸೇರಿಕೊಂಡು ಅತ್ಯಂತ ಪ್ರೀತಿಯಿಂದ ಸನ್ಮಾನಿಸಿದ್ದು ಅವಿಸ್ಮರಣೀಯ ಕಾರ್ಯಕ್ರಮವಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯರಾದ ಡಾ.ಪ್ರೇಮಾನಂದ ಲಕ್ಕಣ್ಣನವರ, ಅಶೋಕ ಬಣಕಾರ, ಉಮೇಶ್ ರುದ್ರದೇವರಮಠ, ಸುರೇಶ ಗುಡುಗೂರ, ಮೃತ್ಯುಂಜಯ ಲಕ್ಕಣ್ಣನವರ ಹಾಗೂ ಸಂಸ್ಥೆಯ ಆಡಳಿತಾಧಿಕಾರಿ ವಿ.ಸಿ.ಹಾವೇರಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.