ಗಣೇಶೋತ್ಸವದಲ್ಲಿ ಸಂಘ ದರ್ಶನ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.09:- ನಗರದ ಶ್ರೀ ಮಾಧವ ಕೃಪಾ ಗಣೇಶೋತ್ಸವ ಈ ಬಾರಿಯೂ ತನ್ನ ವೈಶಿಷ್ಟ್ಯತೆಯ ಕಾರಣಕ್ಕೆ ಜನಮನ ಸೆಳೆಯುತ್ತಿದೆ. ಪರಿಸರ ಸ್ನೇಹಿ ಗಣೇಶನ ವಿಗ್ರಹ ಒಂದೆಡೆ, ಪ್ರತಿದಿನ ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಯ ಕಾರ್ಯಕ್ರಮಗಳು, ಪ್ರಸಾದ ವಿತರಣೆ ಜೊತೆಗೆ ಮಾಧವ ಕೃಪಾ ಅವರಣದಲ್ಲಿ ಸೃಷ್ಟಿಸಲಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಳೆದು ಬಂದ ದಾರಿ, ಅದರ ಸೇವಾ ಪಥ, ಸದ್ದಿಲ್ಲದೇ ಸಾಧಿಸಲಾಗಿರುವ ಸಾಧನೆ, ಆರ್ ಎಸ್ ಎಸ್ ಇತಿಹಾಸದ ಮೈಲಿಗಲ್ಲುಗಳ ಕುರಿತ ಅನನ್ಯ ವಾಕ್ ತ್ರು (ಪ್ರದರ್ಶನ) ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಪ್ರದರ್ಶನದ ವಿಶೇಷತೆ ಎಂದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಾಗಿ ಬಂದ ದಾರಿಯ ಅವಲೋಕನ. ಆರ್ ಎಸ್ ಎಸ್ ಸ್ಥಾಪನೆ, ನಡೆದು ಬಂದ ದಾರಿ, ಸೇವಾ ಪಥ, ದೇಶಸೇವೆ, ರಾಷ್ಟ್ರೀಯ ಸ್ವಯಂ ಸೇವೆಕ ಸಂಘದ ಮೂಲಕ ಮೂಡಿಬಂದ ಜನ ಸೇವಕರು, ದೇಶ-ವಿದೇಶಗಳಲ್ಲಿ ಸಂಘದ ಚಟುವಟಿಕೆಗಳು, ಪ್ರಮುಖ ಘಟನಾವಳಿಗಳು- ಮೈಲಿಗಲ್ಲುಗಳ ಮೇಲಣ ಇದೊಂದು ಅತ್ಯಂತ ವಿಶಿಷ್ಟ ಪ್ರದರ್ಶನವಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಗಣ್ಯರ ಅಭಿಪ್ರಾಯ ಕೂಡಾ ಇಲ್ಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಪೂರ್ವಗ್ರಹ ಇರುವವರು ತಮ್ಮ ಸಂದೇಹಗಳನ್ನು ಈ ಪ್ರದರ್ಶನ ನೋಡಿ ಸರಿಕೊಡಿಸಿಕೊಳ್ಳಬಹುದಾಗಿದೆ. ಈ ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಮೈಸೂರು ಸಂಸದ ಶ್ರೀ ಯದುವೀರ್ ಒಡೆಯರ್, ಸಂಘದ ಸಂದೇಶವನ್ನು ಎಲ್ಲೆಡೆ ಪಸರಿಸಲು ನಾವೆಲ್ಲರೂ ಶ್ರಮಿಸಬೇಕಿದೆ, ಎಂದು ತಿಳಿಸಿದರು.
ಖ್ಯಾತ ಶಿಲ್ಪಿ, ಅಯೋಧ್ಯೆಯ ಶ್ರೀ ರಾಮ ಲಲ್ಲ ಮೂರ್ತಿ ಕೆತ್ತನೆ ಹಿರಿಮೆಯ ಶ್ರೀ ಅರುಣ್ ಯೋಗಿರಾಜ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಧನೆ ಎಲ್ಲರಿಗೂ ಆದರ್ಶ ಎಂದು ತಿಳಿಸಿದರು. ಮಾಧವ ಕೃಪಾ ಗಣೇಶೋತ್ಸವದ ಅಂಗವಾಗಿ ಪ್ರತಿದಿನ ಸಂಜೆ ಆರು ಗಂಟೆಯಿಂದ ಎಂಟು ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಬಳಿಕ ಪ್ರಸಾದ ವಿತರಣೆ ಮಾಡಲಾಗುವುದು.
ಸೆಪ್ಟೆಂಬರ್ 11ರ ಅಪರಾಹ್ನದ ಬಳಿಕ ನೂರಕ್ಕೂ ಸಾರ್ವಜನಿಕ ಗಣೇಶ ವಿಗ್ರಹಗಳೊಂದಿಗೆ ಇಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ವಿಗ್ರಹವನ್ನು ವಿಸರ್ಜಿಸಲಾಗುವುದು.