ಒಂದೇ ದಿನದಲ್ಲಿ 848 ನಿವೇಶನ ಬಿಡುಗಡೆ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.09:- ನ್ಯಾಯಾಲಯದಲ್ಲಿ ಭೂ ವಿವಾದದ ವ್ಯಾಜ್ಯದ ಜತೆಗೆ ಆಯುಕ್ತರ ಅನುಮೋದನೆ ಇಲ್ಲದೆ ನಿವೇಶನಗಳನ್ನು ಬಿಡುಗಡೆಗೊಳಿಸಿಕೊಂಡ ಮುಡಾ ಮಾಜಿ ಅಧ್ಯಕ್ಷರ ವಿರುದ್ಧ ಮಾಜಿ ಆಯುಕ್ತ ಡಿ.ಬಿ.ನಟೇಶ್ ರಾಜ್ಯ ಸರ್ಕಾರಕ್ಕೆ ಬರೆದಿದ್ದ ಪತ್ರ ಬಹಿರಂಗವಾಗಿದ್ದು, ಎರಡು ವರ್ಷಗಳ ಹಳೆಯ ಪ್ರಕರಣಕ್ಕೆ ಮತ್ತೊಮ್ಮೆ ಮರು ಜೀವ ಸಿಕ್ಕಿದೆ.
ಮುಡಾ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಹಗರಣ ಕೇಳಿ ಬಂದ ಬೆನ್ನಲ್ಲೇ ಈಗ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅಧ್ಯಕ್ಷರಾಗಿದ್ದಾಗ ಕೈಗೊಂಡಿದ್ದ ತೀರ್ಮಾನದ ವಿರುದ್ಧ 2022ರ ಫೆ.22ರಂದು ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಡಿ.ಬಿ.ನಟೇಶ್ ಬರೆದಿರುವ ಪತ್ರ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಇದೀಗ ಈ ವಿಚಾರ ಮತ್ತೆ ಸ್ಫೋಟಗೊಂಡು ದೊಡ್ಡ ಸದ್ದು ಮಾಡಿರುವುದು ಮತ್ತೊಂದು ತಿರುವು ಪಡೆಯುವ ಸಾಧ್ಯತೆ ಇದೆ.
ಎಚ್.ವಿ.ರಾಜೀವ್ ಮುಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕೇರ್ಗಳ್ಳಿ, ನಗರ್ತಳ್ಳಿ, ಬಲ್ಲಹಳ್ಳಿ ಗ್ರಾಮದ 252 ಎಕರೆ 10 ಗುಂಟೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಈ ಬಡಾವಣೆ ನಗರಾಭಿವೃದ್ಧಿ ಪ್ರಾಧಿಕಾರದ 2018ರ ಆದೇಶದ ವಿರುದ್ಧವಾಗಿ ರಚನೆಯಾಗಿದೆ. ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಎಚ್.ವಿ.ರಾಜೀವ್ ಅವರೇ ಅಧ್ಯಕ್ಷರಾಗಿದ್ದಾರೆ. 252 ಎಕರೆ ಜಾಗದ ಕೆಲವು ಸರ್ವೆ ನಂಬರ್‍ಗಳ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವ ಕಾರಣ ಬಡಾವಣೆ ನಿವೇಶನಗಳ ಹಕ್ಕುಗಳನ್ನು ಮುಡಾ ವರ್ಗಾವಣೆ ಮಾಡಬಾರದೆಂದು ನ್ಯಾಯಾಲಯ ಆದೇಶ ನೀಡಿತ್ತು. ಹೀಗಿದ್ದರೂ, ಎಚ್.ವಿ.ರಾಜೀವ್ 848 ನಿವೇಶನಗಳನ್ನು ಒಂದೇ ದಿನದಲ್ಲಿ ಮುಡಾದಿಂದ ಬಿಡುಗಡೆಗೊಳಿಸಿ ಖಾತೆ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆಯುಕ್ತರ ಅನುಮೋದನೆ ಇಲ್ಲದಿದ್ದರೂ ನಿವೇಶನಗಳನ್ನು ಬಿಡುಗಡೆಗೊಳಿಸಿಕೊಂಡಿದ್ದಾರೆ ಎಂದು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೆ, ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ 252.10 ಎಕರೆಯಲ್ಲಿ ಬಡಾವಣೆ ವಿನ್ಯಾಸ ನಕ್ಷೆ ಅನುಮೋದನೆಗೆ ಸಂಬಂಧಿಸಿದಂತೆ ಅಗತ್ಯವಿರುವ ಕಡತಗಳನ್ನು ಆಯುಕ್ತರ ಕಚೇರಿಗೆ ಸಲ್ಲಿಸುವಂತೆ ಅಧ್ಯಕ್ಷರಿಗೆ 2022ರ ಫೆ.16ರಂದು ಬರೆದಿರುವ ಪತ್ರ ಈಗ ಬಹಿರಂಗವಾಗಿದೆ. ಮುಡಾ ಆದೇಶದ ವಿರುದ್ಧವಾಗಿ 848 ನಿವೇಶನಗಳನ್ನು ಬಿಡುಗಡೆಗೊಳಿಸಿಕೊಂಡು ತರಾತುರಿಯಲ್ಲಿ ಒಂದೇ ದಿನದಲ್ಲಿ ಖಾತೆ ಮಾಡಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಅನೇಕ ದೂರುಗಳು ಸಹ ಸಲ್ಲಿಕೆಯಾಗಿವೆ. ಸಾರ್ವಜನಿಕರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ದೂರಿನ ಮೇಲೆ ಮುಖ್ಯ ಕಾರ್ಯದರ್ಶಿಯವರ ಆಪ್ತ ಶಾಖೆಯಿಂದ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ವರದಿ ಸಲ್ಲಿಸಬೇಕಿರುವ ಕಾರಣ ಕಡತಗಳನ್ನು ಹಿಂದಿರುಗಿಸುವಂತೆ ಕೇಳಿಕೊಂಡಿದ್ದರು.