ಬೇಡಕಪಳ್ಳಿ ಡೊಳ್ಳು, ಭಜನೆಗಳ ಮಧ್ಯೆ ಸಂಭ್ರಮದಿAದ ಜರುಗಿದ ಪಲ್ಲಕೋತ್ಸವ
ಚಿಂಚೋಳಿ, ಸೆ.೯- ತಾಲ್ಲೂಕಿನ ಸುಲೇಪೇಟ ಹೋಬಳಿ ವ್ಯಾಪ್ತಿಯಲ್ಲಿ ಬರುವ ಬೇಡಕಪಳ್ಳಿ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹನುಮ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ಉತ್ಸವದ ಕಾರಣದಿಂದಾಗಿ ಗ್ರಾಮವನ್ನು ಸಿಂಗಾರಗೊಳಿಸಿದ್ದು,
ಪಲ್ಲಕ್ಕಿ ಮೆರವಣಿಗೆಯ ಹಿಂದಿನ ದಿನ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಹನುಮಾನ ದೇವರಿಗೆ ವಿಶೇಷವಾದ ಬಗೆ ಬಗೆಯ ಪೂಜೆ ವಿಧಿ ವಿಧಾನಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಹನುಮಾನ ದೇವರ ಪಲ್ಲಕ್ಕಿ ಮೆರವಣಿಗೆಯು ಗ್ರಾಮದ ಹನುಮಾನ ದೇವಸ್ಥಾನದಿಂದ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಿಗೆ ಸಂಚರಿಸಿತು. ಜ್ಯೋತಿಯನ್ನು ಹಚ್ಚಿದ ಕಲಶವನ್ನು ಹಿಡಿದುಕೊಂಡು ಯುವತಿಯರು ಪಲ್ಲಕ್ಕಿಯ ಜೊತೆಗೆ ಮೆರವಣಿಗೆಯಲ್ಲಿ ಸಾಗಿದರು. ಒಂದೆಡೆ ಮೆರವಣಿಗೆಯ ಜೊತೆ ಜೊತೆಗೆ ಹಳ್ಳಿ ಸೊಗಡಿನ ಕಲೆಗಳಾದ ಡೊಳ್ಳು ಕುಣಿತ ಭಜನೆ ಹಾಡುಗಳು ಜನರನ್ನು ಆಕರ್ಷಿಸುವಂತಿದ್ದರೆ,
ಇನ್ನೊಂದೆಡೆ ಯುವಕರು ಮಕ್ಕಳು ಆಧುನಿಕ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು. ಒಟ್ಟಾರೆ ಇಂದು ಮರೆಯಾಗುತ್ತಿರುವ ಜಾನಪದ ಕಲೆಗಳನ್ನು ನೆನಪಿಸುವಂತೆ ಅದ್ದೂರಿಯಾಗಿ ಉತ್ಸವ ನಡೆಯಿತು.ಈ ಸಂದರ್ಭದಲ್ಲಿ ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್, ಮಹಾದೇವಪ್ಪ ಪೊಲೀಸ್ ಪಾಟೀಲ್, ರಾಜು ಉಪ್ಪಿನ್, ಚಂದ್ರಶೇಖರ ರೆಡ್ಡಿ ಮಾಲಿ ಪಾಟೀಲ್ ಸೇರಿದಂತೆ ಸಮಸ್ತ ಗ್ರಾಮದ ಹಿರಿಯರು,ಮುಖಂಡರು, ಮಹಿಳೆಯರು ಮಕ್ಕಳು ಯುವಕರು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡು ಯಶಸ್ವಿಗೊಳಿಸಿದರು.