ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣವೇ ಚಾಲನಾ ಶಕ್ತಿ
ಕಲಬುರಗಿ:ಸೆ.8: ಶಿಕ್ಷಣವು ವ್ಯಕ್ತಿಗೆ ಕೇವಲ ಪ್ರಮಾಣ ಪತ್ರ ಮಾತ್ರ ನೀಡದೆ, ಜ್ಞಾನ, ಬುದ್ಧಿ, ಕೌಶಲಗಳನ್ನು ನೀಡುತ್ತದೆ. ಇದರಿಂದ ವ್ಯಕ್ತಿಯು ಶಕ್ತಿಯಾಗಿ ಹೊರಹೊಮ್ಮುವ ಮೂಲಕ ರಾಷ್ಟ್ರದ ಪರಿವರ್ತನೆಗೆ ಕಾರಣವಾಗುತ್ತಾನೆ. ತನ್ಮೂಲಕ ಶಿಕ್ಷಣವು ರಾಷ್ಟ್ರದ ಅಭಿವೃದ್ಧಿಗೆ ಚಾಲನಾ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪಿಡಿಎ ಇಂಜಿನೀಯರಿಂಗ ಕಾಲೇಜಿನ ಪ್ರಾದ್ಯಾಪಕ ಡಾ.ಬಾಬುರಾವ ಶೇರಿಕಾರ ಅಭಿಮತ ವ್ಯಕ್ತಪಡಿಸಿದರು.
ನಗರದ ಸಮೀಪದ ಕಪನೂರನಲ್ಲಿ ಎಎಲ್‍ಎಫ್ ಸಂಸ್ಥೆಯ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಶಿಕ್ಷಣವು ಮಾನವ ಅಭಿವೃದ್ಧಿಯ ಒಂದು ಪ್ರಮುಖ ಅಂಗ. ಮಾನವ ಅಭಿವೃದ್ದಿಗೂ, ಆರ್ಥಿಕಾಭಿವೃದ್ಧಿಗೂ ಅತ್ಯಂತ ನಿಕಟವಾದ ಸಂಬಂಧವಿದೆ. ಆದ್ದರಿಂದಲೇ ಇಂದು ಭಾರತ, ಶಿಕ್ಷಣ ಅಭಿವೃದ್ದಿಗೆ ಅನೇಕ ವಿಧಾನಗಳಲ್ಲಿ ಪ್ರಯತ್ನಿಸುತ್ತಿದೆ. ಶಿಕ್ಷಣವು ಸಾಮಾಜಿಕ ಪರಿವರ್ತನೆಯ ಒಂದು ಪ್ರಮುಖ ಸಾಧನವಾಗಿದೆ. ವರ್ತನೆಯಲ್ಲಿ ಸಕಾರಾತ್ಮಕವಾದ ಬದಲಾವಣೆ ಶಿಕ್ಷಣದಿಂದಲೇ ಸಾಧ್ಯವಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಮೂಲಕ ಪ್ರತಿಶತ ಸಾಕ್ಷರತೆ ಸಾಧಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‍ಬಿಐ ತಾಲೂಕಾ ಆರ್ಥಿಕ ಸಾಕ್ಷರತಾ ಸಮಾಲೋಚಕ ಗೋಪಾ ಜೆ.ಕುಲಕರ್ಣಿ ಅವರು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು. ಬಳಗದ ಕಾರ್ಯದರ್ಶಿ ರಾಜಶೇಖರ ಬಿ.ಮರಡಿ, ಎಎಲ್‍ಎಫ್ ಡಿಜಿಟಲ್ ಸಖಿ ಯೋಜನೆಯ ಕ್ಲಸ್ಟರ್ ಸಂಯೋಜಕಿ ವಿಜಯಲಕ್ಷ್ಮೀ, ಪ್ರಮುಖರಾದ ರೇಣುಕಾ ಸಿ.ಮಠಪತಿ, ಮೆಹಬೂಬಿ, ಲಕ್ಷ್ಮೀ ಶಾಬಾದ, ಕಲ್ಲಮ್ಮ ಪೂಜಾರಿ, ಭಾಗ್ಯಶ್ರೀ ಹಡಗಿಲ್ ಹಾರತಿ, ಸುಜಾರಾ ಆರ್.ಕಪನೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.