ಶ್ರಾವಣ ಆಚರಣೆ ವರ್ಷದುದ್ದಕ್ಕೂ ಸಾಗಲಿ : ಆನಂದ ದೇವರು
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೯:ಶ್ರಾವಣ ಮಾಸ ಎಲ್ಲ ಮಾಸಗಳಲ್ಲಿ ಅತ್ಯಂತ ಪವಿತ್ರವಾದ ಮಾಸ. ಶ್ರಾವಣದ ಆಚರಣೆ ಕೇವಲ ಶ್ರಾವಣ ಮಾಸಕ್ಕೆ ಸೀಮೀತಗೊಳಿಸದೇ ಅದನ್ನು ಇಡೀ ವರ್ಷದುದ್ದಕ್ಕೂ ಆಚರಿಸುವ ಮನಸ್ಥಿತಿ ನಮ್ಮಲ್ಲಿ ಬರಲಿ ಎಂದು ಹುಣಶ್ಯಾಳ ಪಿ.ಬಿಯ ಹಿರೇಮಠ ಸಂಸ್ಥಾನದ ಪ.ಪೂ ಆನಂದ ದೇವರು ಅಭಿಪ್ರಾಯಪಟ್ಟರು.
ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಹಾನಗಲ್ಲ ಪೂಜ್ಯ ಶ್ರೀ ಕುಮಾರೇಶ್ವರ ಜಯಂತಿಯ ಪ್ರಯುಕ್ತ “ಚಿರವಾಗಿರಲಿ ಶ್ರಾವಣದ ಶರಣ್ಯಭಾವ” ಕುರಿತು ಚಿಂತನಾ ಗೋಷ್ಠಿಯನ್ನು ಕುಮಾರೇಶ್ವರರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದ ಆನಂದ ದೇವರು, ಕುಮಾರೇಶ್ವರರು ಭಾರತ ಕಂಡ ಶ್ರೇಷ್ಠ ಸಂತರು, ಶಿವಯೋಗ ಮಂದಿರವನ್ನು ಸ್ಥಾಪಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದು, ಇಂದು ನಾವೆಲ್ಲ ಅವರ ಸಂದೇಶಗಳನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸೈಯದ್ ಶಾಹ ಹುಸೇನ್‌ಪೀರ ಖಾದ್ರಿ ಚಿಸ್ತಿ ಮನಗೂಳಿಯ ಪೀಠಾಧಿಪತಿಗಳಾದ ಪ.ಪೂ. ಡಾ. ಸೈಯದ್ ಎಫ್.ಎಚ್ ಇನಾಮದಾರ ಸಾಹೇಬರು ಮಾತನಾಡಿ, “ಗುರು ಎಂದರೆ ಬೆಳಕು” ಎನ್ನುತ್ತಾ ಆ ಪರಮಾತ್ಮ ಇಂದು ನಮ್ಮೆಲ್ಲರಿಗೂ ಅತ್ಯಂತ ಶ್ರೇಷ್ಠವಾದ ಮಾನವ ಜನ್ಮ ನೀಡಿದ್ದು ಆ ಇಡೀ ಜೀವನ ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ, ಭಗವಂತ ಮೆಚ್ಚುವ ರೀತಿಯಲ್ಲಿ ಬದುಕಿದಾಗ ಮಾತ್ರ ಈ ಮಾನವ ಜನ್ಮಕ್ಕೆ ಅರ್ಥ ಬರುತ್ತದೆ. ಶ್ರಾವಣದ ಶರಣ್ಯಭಾವ ಇಡೀ ವರ್ಷದುದ್ದಕ್ಕೂ ನಿರಂತರವಾಗಿರಲಿ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಬುರಣಾಪುರ ಆರೂಢಾಶ್ರಮದ ಯೋಗೇಶ್ವರಿ ಮಾತಾಜಿಯವರು, ನುಡಿದಂತೆ ನಡೆದ ಶರಣ-ಶರಣೆಯರ ಆದರ್ಶ ವಿಚಾರಗಳನ್ನು ಮೆಲುಕು ಹಾಕಬೇಕಾದ ಅವಶ್ಯಕತೆ ಇದ್ದು, ಆ ನಿಟ್ಟಿನಲ್ಲಿ ಹಾನಗಲ್ಲ ಕುಮಾರೇಶ್ವರರು ಹಾಗೂ ಹುಬ್ಬಳ್ಳಿಯ ಸಿದ್ಧಾರೂಢ ಮಹಾಸ್ವಾಮಿಗಳ ಸಂದೇಶಗಳನ್ನು ಅರ್ಥೈಸಿಕೊಂಡು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗೆ ಅರ್ಥ ಬರುತ್ತದೆ ಎಂದರು.
ಶ್ರಾವಣದ ಶರಣ್ಯಭಾವ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ, “ಅರಿತರೆ ಶರಣ ಮರೆತರೆ ಮಾನವ” ಎಂಬುದನ್ನು ನಾವೆಲ್ಲರೂ ಅರ್ಥೈಸಿಕೊಂಡು ಗುರು, ಲಿಂಗ ಜಂಗಮದ ಮೂಲಕ ಕಾಯಕ ಮತ್ತು ದಾಸೋಹದ ಮಹತ್ವವನ್ನು ಅರಿತುಕೊಂಡು ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳಿಂದ ದೂರವಿದ್ದು ಶರಣರ ವಿಚಾರಗಳನ್ನು ತಿಳಿದು ಅದರಂತೆ ನಡೆಯಬೇಕು. ಈ ಆಚರಣೆಗಳು ಕೇವಲ ಶ್ರಾವಣ ಮಾಸಕ್ಕೆ ಸೀಮೀತಗೊಳಿಸದೇ ವರ್ಷದುದ್ದಕ್ಕೂ ಆಚರಿಸಬೇಕೆಂದು ಕರೆಕೊಟ್ಟರು.
ಮುಖ್ಯ ಅತಿಥಿಗಳಾಗಿ ಗುರುಬಸಯ್ಯ ಹಿರೇಮಠ, ಶರಣಬಸಪ್ಪ ಗಂಗೆಶೆಟ್ಟಿ, ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ ಸಂಗಮೇಶ ಮೇತ್ರಿ ಮಾತನಾಡಿದರು.
ಡಾ. ಸಂಗಮೇಶ ಮೇತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೆಹತಾಬ ಕಾಗವಾಡ ತತ್ವ ಪದ ಹಾಡಿ ರಂಜಿಸಿದರು.
ರವಿ ಕಿತ್ತೂರ ಸ್ವಾಗತಿಸಿದರು. ಶಿಕ್ಷಕಿ ಶಿಲ್ಪಾ ಭಸ್ಮೆ ನಿರೂಪಿಸಿದರು. ಕು. ಶೋಭಾ ಹರಿಜನ ವಂದಿಸಿದರು.
ಕಾರ್ಯಕ್ರಮದಲ್ಲಿ ಅಭಿಷೇಕ ಚಕ್ರವರ್ತಿ, ಕಮಲಾ ಮುರಾಳ, ಕವಿತಾ ಕಲ್ಯಾಣಪ್ಪಗೋಳ, ರಾಜೇಸಾಬ ಶಿವನಗುತ್ತಿ, ಸಿದ್ರಾಮಯ್ಯ ಲಕ್ಕುಂಡಿಮಠ, ಪ್ರಭು ಕೋಟ್ಯಾಳ, ಜಯಶ್ರೀ ಹಿರೇಮಠ, ವಿಜಯಲಕ್ಷ್ಮಿ ಹಳಕಟ್ಟಿ, ಬಸವಲಿಂಗಪ್ಪ ರಕ್ಕಸಗಿ, ಡಾ. ಜಿ ಶ್ರೀನಿವಾಸಲು, ರಾಮನಗೌಡ ಪಾಟೀಲ, ಲತಾ ಗುಂಡಿ, ಶಿವತನಯ ಸುಧಾಕರ, ಜಿ.ಎಸ್ ಬಳ್ಳೂರ, ಶ್ರೀಕಾಂತ ನಾಡಗೌಡ, ಮಹಾದೇವಿ ತೆಲಗಿ, ಬಸವರಾಜ ಕೋನರಡ್ಡಿ, ಮಹ್ಮದ ಇಕ್ಬಾಲ್ ಅವಟಿ, ಅಮಸಿದ್ದ ಪೂಜಾರಿ, ಗಂಗಮ್ಮ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.