ಧರ್ಮ ಸಂಘರ್ಷದ ನಡುವೆ ಭಾವೈಕ್ಯತೆ, ಮುಸ್ಲಿಂ ಯುವಕರಿಂದ ಗಣೇಶ ಹಬ್ಬ ಆಚರಣೆ
ಮಹಾಂತೇಶ ಹಾದಿಮನಿ.
ದೇವರಹಿಪ್ಪಗಿ :ಸೆ.೯:ಒಟ್ಟಿನಲ್ಲಿ ಗಣೇಶ ಪ್ರತಿಷ್ಠಾಪನೆ ಎನ್ನುವುದು ಹಿಂದೂಗಳಿಗೆ ಮಾತ್ರ ಎಂಬ ಭಾವನೆಯನ್ನು ದೇವೂರ ಗ್ರಾಮದ ಮುಸ್ಲಿಂ ಯುವಕರು ದೂರ ಮಾಡಿದ್ದಾರೆ. ಹಿಂದೂ- ಮುಸ್ಲಿಂ ಯುವಕರು ಸೇರಿ ಪ್ರತಿವರ್ಷ ಗಣೇಶನ ಹಬ್ಬ ಆಚರಿಸುತ್ತಿರುವುದು ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಯುವುದಕ್ಕೆ ದೇವೂರ ಗ್ರಾಮದ ಯುವಕರು ಮಾದರಿಯಾದ್ದಾರೆ.
ದೇವೂರ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ದೇವಾಸ್ಥಾನದಲ್ಲಿ ಪ್ರತಿ ವರ್ಷ ಗಣೇಶನನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಪೂಜಿಸುವುದರ ಮೂಲಕ ಭಾವೈಕ್ಯತೆಯ ಭಾವ ಮೆರೆದಿದ್ದಾರೆ.ಮುಸ್ಲಿಮ ಯುವಕರು ಹಿಂದೂ ಹಬ್ಬ ಆಚರಣೆ ಮಾಡುವ ಮೂಲಕ ನಾವೆಲ್ಲ ಒಂದೇ ಎಂಬ ಸಂದೇಶ ಸಾರಲಾಗಿದೆ. ಮುಸ್ಲಿಂ ಸಮುದಾಯದ ಯುವಕರಾದ ಪೈಗಂಬರ್ ನಧಾಪ, ಸಿಕಿಂದರ ನಧಾಪ,ರಫೀಕ್ ಮುಲ್ಲಾ,ರಾಜು ನಧಾಪ,ಬಂದಗಿಸಾಬ ನಧಾಪ, ಅಬ್ಬಾಸಲಿ ನಧಾಪ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜೆ ಸಲ್ಲಿಸುವ ಮೂಲಕ ದೇವೂರ ಗ್ರಾಮದಲ್ಲಿ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ.
ಅಬ್ಬಾಸಲಿ ಭಾಗವನ ಅವರು ದೇವೂರ ಗ್ರಾಮದಲ್ಲಿ ಎಲ್ಲಾ ಜಾತಿ ಜನಾಂಗದವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನಾವೆಲ್ಲರೂ ಕೂಡಿ ಇರೋಣ, ಮಾನವರು ನಾವೆಲ್ಲ ಒಂದೇ ಎಂಬ ತತ್ವದಲ್ಲಿ ಜೀವನ ಸಾಗಿಸಬೇಕೆಂದು ಹೇಳುತ್ತಾರೆ. ಬರೀ ಹೇಳುವುದೊಂದೇ ಅಲ್ಲ, ಅದರಂತೆ ನಡೆದುಕೊಂಡು ಬರುತ್ತಿದ್ದಾರೆ.ಒಂದು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನುತ್ತಾರಲ್ಲ ಹಾಗೆ.
ಮುಸ್ಲಿಂ ಹಬ್ಬ ಆಚರಣೆ ಮಾಡಿಕೊಂಡು ಬರುವ ಜೊತೆ ಹಿಂದೂ ಹಬ್ಬಗಳನ್ನು ಕೂಡ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಗಣೇಶ ಚತುರ್ಥಿ ದಿನದಂದು ಗಣೇಶ ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ನಿತ್ಯವೂ ಪೂಜೆ ಮಾಡುತ್ತಾರೆ. ಮಕ್ಕಳು ಕೂಡ ಗಣೇಶನ ಪೂಜೆಯಲ್ಲಿ ಭಾಗಿಯಾಗುತ್ತಾರೆ. ೧೦ ವರ್ಷಗಳಿಂದ ನಿರಂತರವಾಗಿ ಗಣೇಶನನ್ನು ಪ್ರತಿಷ್ಠಾಪಿಸುವುದರ ಮೂಲಕ ಸಾಂಪ್ರದಾಯಿಕ ಹಬ್ಬಕ್ಕೆ ಚಾಲನೆ ನೀಡಿ ನಂತರ ನಿತ್ಯ ಪೂಜೆ ಹಾಗೂ ಅನ್ನ ಸಂತರ್ಪಣೆ ಕೈಗೊಳ್ಳುತ್ತಿದ್ದಾರೆ.
ಜಾತಿ ಬೆರೆಯಾದರು ನಾವೆಲ್ಲ ಮಾನವರು ಒಂದೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕೆಂದು ಅಬ್ಬಾಸಲಿ ಭಾಗವಾನ್ ಅವರ ಮಾತಾಗಿದೆ.
ಜಾತಿ ಬೆರೆಯಾದರು ನಾವೆಲ್ಲರೂ ಒಂದೇರಿ ವಿಶ್ವಾಸದಿಂದ ಬದುಕಬೇಕು. ನಾವು ನಮ್ಮ ಸಮುದಾಯದ ಹಬ್ಬದ ಜೊತೆ ಹಿಂದೂ ಹಬ್ಬ ಕೂಡ ಆಚರಣೆ ಮಾಡಿಕೊಂಡು ಬರುತ್ತಿದ್ದೆವೆ. ಸುಮಾರು ಹತ್ತು ವರ್ಷದಿಂದ ಈ ಗಣೇಶ ಮೂರ್ತಿ ಕೂಡಿಸಿ ಪೂಜೆ ಮಾಡಿಕೊಂಡು ಬರುತ್ತಿದ್ದೆವೆ.ಸರ್ವರಿಗೂ ಅಲ್ಲಾ ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.