ಜಿಲ್ಲಾ ಕಸಾಪದಿಂದ ಅಕ್ಟೋಬರ್ ತಿಂಗಳಿನಲ್ಲಿ ಆಯೋಜನೆ:ಸೂಫಿ ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ: ತೇಗಲತಿಪ್ಪಿ ಮಾಹಿತಿ
ಕಲಬುರಗಿ:ಸೆ.8: ಈ ನೆಲದ ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬರುವ ಅಕ್ಟೋಬರ್ ತಿಂಗಳಿನಲ್ಲಿ ನಗರದಲ್ಲಿ ಒಂದು ದಿನದ ಕಲಬುರಗಿ ಜಿಲ್ಲಾ ಪ್ರಥಮ ಸೂಫಿ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ನಮ್ಮ ಕಲ್ಯಾಣ ನಾಡು ಕರ್ನಾಟಕದ ಹೆಬ್ಬಾಗಿಲಿದ್ದಂತೆ. ಕಲಬುರಗಿ ಜಿಲ್ಲೆ ಭಾರತದಲ್ಲೇ ಭಾವೈಕ್ಯ ಬಿಂಬಿಸುವ ಪ್ರಮುಖ ತಾಣವಾಗಿದೆ. 12ನೇ ಶತಮಾನದ ಬಸವಾದಿ ಶರಣರ ಕಾಯಕ-ದಾಸೋಹ ಸೂತ್ರ ಪಾಲಿಸಿದ ಶರಣಬಸವೇಶ್ವರರು, ಶ್ರೇಷ್ಠ ಸೂಫಿ ಸಂತ ಖ್ವಾಜಾ ಬಂದೇ ನವಾಜ್‍ರು ನಡೆದು ನುಡಿದ ಸಮನ್ವಯತೆಯ ಪವಿತ್ರ ನೆಲವಿದು. ಹೀಗಾಗಿ ಈ ನೆಲ ಐತಿಹಾಸಿಕ, ಸಾಂಸ್ಕøತಿಕ ಮತ್ತು ಭೌಗೋಳಿಕ ದೃಷ್ಟಿಯಿಂದಲೂ ತುಂಬಾ ಪ್ರಮುಖವಾದ ನೆಲವಾಗಿದ್ದು, ಸೂಫಿ ಸಾಹಿತ್ಯ ಕರ್ನಾಟಕದ ಸೂಫಿ ಪರಂಪರೆಗೆ ಜಿಲ್ಲೆಯ ಕೊಡುಗೆ ಅಮೋಘವಾಗಿದೆ. ಈ ನಿಟ್ಟಿನಲ್ಲಿ ಶ್ರೇಷ್ಠ ಪರಂಪರೆಯನ್ನು ಇಂದಿನ ಹೊಸ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶ ಈ ಸಮ್ಮೇಳನದ್ದಾಗಿದೆ ಎಂದು ಹೇಳಿದರು.
ಈಗಾಗಲೇ ವಿನೂತನ ಮತ್ತು ವಿಶೇಷ ರೀತಿಯ ಸಾಹಿತ್ಯ ಸಮ್ಮೇಳನಗಳು ಪರಿಷತ್ತಿನ ವತಿಯಿಂದ ಜರುಗಿವೆ. ಕಳೆದ ಎರಡೂವರೆ ವರ್ಷಗಳಲ್ಲಿ ಶಿಕ್ಷಕ ಸಾಹಿತ್ಯ, ಪತ್ರಕರ್ತ ಸಾಹಿತಿಗಳ, ವಚನ ಸಾಹಿತ್ಯ, ದಾಸ ಸಾಹಿತ್ಯ, ತತ್ವಪದ ಸಾಹಿತ್ಯ ಹಾಗೂ ದಲಿತ ಚಳವಳಿ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದೀಗ ಮತ್ತೆ ಇನ್ನೊಂದು ವಿಶೇಷಾದ ಸೂಫಿ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲು ಕನ್ನಡ ಭವನದಲ್ಲಿ ನಡೆದ ಸಭೆಯಲ್ಲಿ ಒಮ್ಮತಾಭಿಪ್ರಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಕನ್ನಡ ನಾಡು-ನುಡಿ ಶ್ರೀಮಂತಗೊಳಿಸುವಲ್ಲಿ ಹಾಗೂ ಭಾವೈಕ್ಯತೆ ಮೂಡಿಸುವಲ್ಲಿ ಸೂಫಿ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದೆ. ಇಂಥ ಸೂಫಿ ಸಾಹಿತ್ಯ ಸಮ್ಮೇಳನ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕಲಬುರಗಿ ನೆಲದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಒಂದು ದಿನದ ಕಲಬುರಗಿ ಜಿಲ್ಲಾ ಸೂಫಿ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗುತ್ತದೆ. ಸಮ್ಮೇಳನ ನಿಮಿತ್ತ ಸ್ವಾಗತ ಸಮಿತಿ ರಚಿಸಿ ಅಧಿಕೃತ ಚಾಲನೆ ನೀಡಲಾಗುವುದು. ಈ ಕುರಿತು ಬರುವ ದಿನಗಳಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಹಾಗೂ ಅದರ ರೂಪುರೇಷೆಗಳ ಬಗ್ಗೆ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಿಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಡಾ. ರೆಹಮಾನ್ ಪಟೇಲ್, ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ ಜಾವಳಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ರಮೇಶ ಡಿ ಬಡಿಗೇರ, ಸಿದ್ಧಲಿಂಗ ಬಾಳಿ, ಬಾಬುರಾವ ಪಾಟೀಲ, ಸೋಮಶೇಖರ ನಂದಿಧ್ವಜ, ಶಿವಾನಂದ ಪೂಜಾರಿ, ಸೋಮಶೇಖರಯ್ಯಾ ಹೊಸಮಠ, ಜೆ.ಎಸ್. ವಿನೋದಕುಮಾರ, ಸುರೇಶ ದೇಶಪಾಂಡೆ, ಸಂತೋಷ ಕುಡಳ್ಳಿ, ದಿನೇಶ ಮದಕರಿ, ಹಣಮಂತಪ್ರಭು, ಎಂ ಎನ್ ಸುಗಂಧಿ, ಪ್ರಭುಲಿಂಗ ಮೂಲಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.