ಗಣಪತಿ ಬಪ್ಪಾ ಚಿತ್ರ ಗೀತೆಗಳ ಜನಾರ್ಪಣೆ ಮಾಡಿದ ಗಜಲಕ್ಷ್ಮೀ
ಕಲಬುರಗಿ,ಸೆ.9:ಎ.ಎಂ. ಫಿಲಂಸ್ ಅಂಡ್ ಎಂಟರ್ಟೈನ್ವೆಂಟ್ ಸಂಸ್ಥೆ ನಿರ್ಮಿಸಿದ ‘ಗಣಪತಿ ಬಪ್ಪಾ’ ಕನ್ನಡ ಚಲನಚಿತ್ರ ಶೀಘ್ರವೇ ನಾಡಿನ ಚಲನಚಿತ್ರ ಮಂದಿರಗಳಲ್ಲಿ ಪ್ರಸಾರಕ್ಕೆ ಅಣಿಯಾಗಿದೆ. ಅದಕ್ಕೂ ಮೊದಲು ಆ ಚಿತ್ರದ ಹಾಡುಗಳು ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ಕಡಗಂಚಿಯ ಶ್ರೀ ಶಾಂತಲಿಂಗೇಶ್ವರ ಹಿರೇಮಠದಲ್ಲಿ ಶುಕ್ರವಾರ ಶ್ರೀಮಠದ ಗಜಲಕ್ಷ್ಮೀ ಜನಾರ್ಪಣೆಗೊಳಿಸಿದ್ದಾಳೆ.
ಬಿಸಿಲೂರಿನ ಕಾವಿನಲ್ಲೇ ಅರಳಿದ ಯುವ ಕಲಾವಿದರುಗಳ ಕೊಡುಗೆ ‘ಗಣಪತಿ ಬಪ್ಪಾ’ ಚಿತ್ರವಾಗಿದೆ. ಕಲಬುರಗಿಯ ಆನಂದ ವಠಾರ್ ಕಥೆ- ಚಿತ್ರಕಥೆ,-ಸಂಭಾಷಣೆ-ಸಾಹಿತ್ಯದಲ್ಲಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಈ ಚಿತ್ರಕ್ಕೆ ಅಪ್ಪಟ್ಟ ಕಲಬುರಗಿ ಜವಾರಿ ನೆಲದ ಹುಡುಗ ಮಹೇಶ್ ಅರ್ಜುನ್ ನಾಯಕರಾಗಿದ್ದಾರೆ. ಇವರ ಜೊತೆಗೆ ಮುಂಬೈ ಮೂಲದ ಪೂಜಾ ಸಾಲುಂಖೆಯವರು ನಟಿಸಿದ್ದಾರೆ. ಚಿತ್ರದ ಕೇಂದ್ರ ಬಿಂದುವಾಗಿ ಲೇಡಿ ವಿಲನ್ ಮುಂಬೈನ ಅಮಿತಾ ದೇಶಮುಖ್, ಬೆಂಗಳೂರಿನ ಡಾ. ನಾಗೇಶ ಕಾವೇಟಿ ಅಭಿನಯಿಸಿದ್ದಾರೆ.
ಸಂಗೀತ ಪ್ರಯಾಶ್ ಮಜುಂದಾರ್, ಹಿನ್ನಲೆ ಸಂಗೀತ ಶ್ರೀನಿವಾಸ ನೀಡಿರುವ ಈ ಚಿತ್ರಕ್ಕೆ ಆನಂದ್ ವಠಾರ್ ಅವರು ಸಂಕಲನವಿದೆ. ಆನಂದ ವಠಾರ್ ಮತ್ತು ವಿನ್ಸೆನ್ಸ್ ಅಮಲಾಜ್ ಜಂಟಿಯಾಗಿ ಛಾಯಾಗ್ರಹಣದಲ್ಲಿ ಸಿನೇಮಾದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.ಹಾಡುಗಳಿಗೆ ರಾಜೇಶ್ ಕೃಷ್ಣನ್, ಅಮಿತ್ ಮುತೇಜ್, ಶತದ್ರು ಕಬೀರ್, ಶುಭಾಂಗಿ ಕೇದಾರ್ ಅವರುಗಳು ತಮ್ಮ ಸಿರಿಕಂಠದಿಂದ ಹಾಡುಗಳು ಶ್ರೀಮಂತಗೊಳಿಸಿದ್ದಾರೆ. ಚಿತ್ರೀಕರಣ ಉತ್ತರ ಪ್ರದೇಶದ ವಾರಣಾಸಿ (ಕಾಶಿ), ಮಹಾರಾಷ್ಟ್ರದ ಮುಂಬೈ, ಪುಣೆ, ಸೇರಿದಂತೆ ಕರ್ನಾಟಕದ ಕಲಬುರಗಿ, ಭೈರಾಮಡಗಿ, ಉಡುಪಿ, ಮುಧೋಳ್ (ಬಾಗಲಕೋಟ), ಯಾದಗಿರಿ, ಬೆಂಗಳೂರಿನ ರಮಣೀಯ ಸ್ಥಳಗಳಲ್ಲಿ ನಡೆದಿದೆ.
ಕಡಗಂಚಿಯ ಪೂಜ್ಯಶ್ರೀ ವೀರ ತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದದಲ್ಲಿ ನಡೆದ ಈ ಹಾಡುಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ‘ಗಣಪತಿ ಬಪ್ಪಾ’ ಟೈಟಲ್ ಸಾಂಗ್‍ಗೆ ಸೇಡಂನ ಶೃತಿ ಚರಂತಿಮಠ ಭರತ ನಾಟ್ಯ ಮಾಡಿ ರಂಜಿಸಿದರು.ಗಣ್ಯರಾದ ಶಿವಶರಣಪ್ಪ ಜಮಾದಾರ, ನಾಗಪ್ಪ ಜಮಾದಾರ, ಅರ್ಜುನ್ ಜಮಾದಾರ, ಮಲ್ಲಿಕಾರ್ಜುನ ವಠಾರ, ಅಮೃತ್ ಪೂಜಾರಿ, ನಾಗರಾಜ್ ಗಂದಿಗುಡಿ, ಪತ್ರಕರ್ತ ಗುಂಡೂರಾವ ಕಡಣಿ, ಬಸವರಾಜ್ ಪಾಟೀಲ ನಿಪ್ಪಾಣಿ, ಶ್ರೀಕಾಂತ ಪಾಟೀಲ ದಿಕ್ಸಂಗಿ ಸೇರಿದಂತೆ ಚಿತ್ರ ತಂಡದ ಸದಸ್ಯರುಗಳಾದ ಜಗನ್ನಾಥ ಜಮಾದಾರ, ಭಾಗ್ಯವಂತ ಜಮಾದಾರ, ಸರ್ವೇಶ ವಠಾರ ಮತ್ತಿರರು ಇದ್ದರು ಎಂದು ವಿಶ್ವಾರಾಧ್ಯ ಸೇವಾ ಸಮಿತಿ ನಗರ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ತಿಳಿಸಿದ್ದಾರೆ.