ಕಲಬುರಗಿ ಕೋಟೆಗೆ ಡಿ.ಸಿ. ಭೇಟಿ,ಫೆನ್ಸಿಂಗ್ ಮಾಡುವಂತೆ ಸೂಚನೆ
ಕಲಬುರಗಿ:ಅ.3: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ಕಲಬುರಗಿ ಮಹಾಗರ ಪಾಲಿಕೆಯ ಮಹಾಪವರರಾದ ಯಲ್ಲಪ್ಪ ಎಸ್. ನಾಯಕೋಡಿ ಅವರೊಂದಿಗೆ ನಗರದ ಹೃದಯ ಭಾಗದಲ್ಲಿರುವ ಕಲಬುರಗಿ ಕೋಟೆಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಸಂರಕ್ಷಣೆ ಕಾರ್ಯ ಪರಿಶೀಲಿಸಿದರು.
ಕಲಬುರಗಿ ಕೋಟೆ ಸುತ್ತ ಸುಮಾರು 7 ಕೊಟಿ ರೂ. ಅಂದಾಜು ಮೊತ್ತದಲ್ಲಿ ಸಂರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಕೋಟೆ ಸುತ್ತ ಕಂದಕದಲ್ಲಿದ್ದ ಹೂಳು ತೆಗೆದಿರುವುದರಿಂದ ಹೊಸ ನೀರು ಸೇರಿಕೊಂಡಿದೆ. ಮೀನು ಕೃಷಿ ಕೈಗೊಳ್ಳುವಂತೆ ಸಲಹೆ ನೀಡಿದ ಅವರು ಕೂಡಲೆ ಕೋಟೆ ಸುತ್ತ ಫೆನ್ಸಿಂಗ್ ಕಾರ್ಯ ಕೈಗೊಳ್ಳೂವಂತೆ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇನ್ನು ಕೋಟೆಯೊಳಗೆ ಕೆ.ಕೆ.ಆರ್.ಡಿ.ಬಿ.ಯ 70 ಲಕ್ಷ ರೂ. ಅನುದಾನದಲ್ಲಿ ನವೀಕರಿಸಿದ ಕಲ್ಯಾಣಿ ಮತ್ತು ಆರ್.ಓ. ಪ್ಲ್ಯಾಂಟ್ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಸೂಕ್ತ ನಿರ್ವಹಣೆ ಮಾಡುವಂತೆ ಸೂಚಿಸಿದ ಅವರು, ಶಹಾಬಜಾರ ಪ್ರದೇಶದ ಮಹಾದೇವ ನಗರದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿದ ಕಲ್ಯಾಣಿ ಕಾಮಗಾರಿಯನ್ನು ವೀಕ್ಷಿಸಿದರು.
ಇನ್ನು ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಎಲ್ & ಟಿ ಕಂಪನಿಯಿಂದ ಕೈಗೆತ್ತಿಕೊಂಡಿರುವ ಓ.ಎಚ್.ಟಿ. ಕಾಮಗಾರಿ ವೀಕ್ಷಿಸಿ, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಮತ್ತು ಕಾಮಗಾರಿಗೆ ವೇಗ ಹೆಚ್ಚಿಸುವಂತೆ ಸೂಚಿಸಿ ಈಗಾಗಲೆ ಕೈಗೆತ್ತಿಕೊಂಡಿರುವ 12 ರಲ್ಲಿ 5 ಕಾಮಗಾರಿ ಬೇಗ ಮುಗಿಸಿದಲ್ಲಿ ಬರುವ ನವೆಂಬರ್ 1 ರಂದು ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗುವುದೆಂದು ತಿಳಿಸಿದರು.
ಶೌಚಾಲಯ ಕಾಮಗಾರಿ ವೀಕ್ಷಣೆ:
ಇದಕ್ಕು ಮುನ್ನ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 15ನೇ ಹಣಕಾಸಿನ 2.49 ಕೋಟಿ ರೂ. ಅನುದಾನದಡಿ ಕೈಗೆತ್ತಿಕೊಂಡಿರುವ 10 ಮಹತ್ವಕಾಂಕ್ಷೆಯ ಶೌಚಾಲಯಗಳ ಕಾಮಗಾರಿ ಪೈಕಿ ಸಿಟಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ.ಜಾಧವ, ಎಲ್ & ಟಿ ಕಂಪನಿಯ ಸುಂದರ ರಾಜನ್ ಸೇರಿ ಮತ್ತಿತರ ಅಧಿಕಾರಿಗಳು ಇದ್ದರು.