ಬಳ್ಳಾರಿಗೆ ಬಂದ ಜನಾರ್ಧನರೆಡ್ಡಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಅಕ್ರಮ, ಅವೈಜ್ಞಾನಿಕ ಗಣಿಗಾರಿಕೆ, ಸಾಗಾಣಿಕೆ, ಅಕ್ರಮ ಹಣ ಸಂಪಾದನೆ ಆರೋಪದಡಿ ಸಿಬಿಐನಿಂದ ಬಂಧಿತರಾಗಿ, ಕಳೆದ 13 ವರ್ಷಗಳ ನಂತರ ಬಳ್ಳಾರಿ ನಗರಕ್ಕೆ ನ್ಯಾಯಾಲಯದ ನಿರ್ಭಂದ ಇಲ್ಲದೆ ಇಂದು ಸಂಜೆ ಆಗಮಿಸಿದ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.
ಸಿಬಿಐ ಕಳೆದ 2011 ರ ಸೆ.5 ರಂದು ಬಂಧನ‌ ಮಾಡಿತ್ತು. ಐದು ವರ್ಷಗಳ ನಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದರೂ, ಸಾಕ್ಷಿ ನಾಶ ಮಾಡುತ್ತಾರೆಂದು ಬಳ್ಳಾರಿಗೆ ಬರದಂತೆ ನಿರ್ಭಂದ ವಿಧಿಸಿತ್ತು.
ಈಗ ಆ ನಿರ್ಭಂದ ತೆರವು ಮಾಡಿದ ನಂತರ ಮೊದಲ ಬಾರಿಗೆಈ ದಿನ ಜನಾರ್ಧನರೆಡ್ಡಿ ಬಳ್ಳಾರಿಗೆ ಬಂದಿದ್ದಾರೆ
ಗಂಗಾವತಿಯ ಶಾಸಕರಾಗಿರುವ ಅವರು
ಇಂದು ಬೆಳಿಗ್ಗೆ ಅಲ್ಲಿನ ವಿವಿಧ ದೇವಾಲಯಗಳಿಗೆ ಪತ್ನಿ ಲಕ್ಷ್ಮೀ ಅರುಣ ಜೊತೆ ಪೂಜೆ ಸಲ್ಲಿಸಿ, ಸಂಜೆ ನಗರಕ್ಕೆ ಆಗಮಿಸಿದಾಗ ಅಭಿಮಾನಿಗಳು ಅಲ್ಲಿಪುರದ ಮಹದೇವತಾತಾನ ಮಠದ ಬಳಿ ಜೆಸಿಬಿ ಮೂಲಕ ಬೃಹತ್ ಹಾರ ಹಾಕಿ, ಹೂಮಳೆ ಸುರಿಸಿದರು ಅಭಿಮಾನಿಗಳು ಪಟಾಕಿ ಸಿಡಿಸಿ ಸ್ವಾಗತಿಸಿದರು.
ನಂತರ ಸುದಾಕ್ರಾಸ್, ಮೋತಿ ಸರ್ಕಲ್, ರಾಯಲ್ ಸರ್ಕಲ್, ಮೂಲಕ ದುರ್ಗಮ್ಮ ಗುಡಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದರು.
ಜನಾರ್ದನ ರೆಡ್ಡಿ ಬರುವ ಮಾರ್ಗ ದೂದ್ದಕ್ಕೂ ವೃತ್ತಗಳಲ್ಲಿ ಹೂವಿನ ಮಳೆ ಸುರಿಸಲಾಯ್ತು. ಬ್ಯಾಂಡ್, ತಾಷ್ಯಾ, ಗೊರವ ಕುಣಿತ, ತಮಟೆ ವಾದ್ಯ, ಸುಮಂಗಲಿಯರ ಆರತಿ ಹೀಗೆ ಹತ್ತಾರು ಕಲಾ ತಂಡಗಳಿಂದ ಸ್ವಾಗತ ನಡೆಯಿತು.
ಈ ಹಿಂದೆ ಜೈಲಿನಿಂದ ಮೊದಲ‌ ಬಾರಿಗೆ ಜಾಮೀನು ಪಡೆದು ನ.1 ರಂದು ಬಳ್ಳಾರಿಗೆ ಬಂದಾಗ ಆತ್ಮೀಯ ಸ್ನೇಹಿತ ಶ್ರೀರಾಮುಲು, ಸಹೋದರ ಸೋಮಶೇಖರ ರೆಡ್ಡಿ, ಮೊದಲಾದವರು ಜೊತೆಗಿದ್ದು ಸ್ವಾಗತಿಸಿದ್ದು ವಿಶೇಷತೆ ಇತ್ತು. ಅದು ಈ ಬಾರಿ ಕಂಡು ಬರಲಿಲ್ಲ.