ವಸತಿ ರಹಿತರಿಗೆ ಆವಾಸ ದೊರೆಯಲಿ
ಕಲಬುರಗಿ:ಅ.3: ಮೂಲಭೂತ ಸೌಲಭ್ಯಗಳು ರಾಷ್ಟ್ರದ ಅಭಿವೃದ್ಧಿಯ ಸಾಧನಗಳು. ಶುದ್ಧವಾದ ಕುಡಿಯುವ ನೀರು, ಆಹಾರ, ವಸತಿ, ಶಿಕ್ಷಣ, ಆರೋಗ್ಯ ಸೌಕರ್ಯಗಳು, ರಸ್ತೆಗಳು ಸೇರಿದಂತೆ ಮುಂತಾದ ಮೂಲಭೂತ ಸೌಕರ್ಯಗಳು ದೊರೆಯಬೇಕು. ಇಂದಿಗೂ ಕೂಡಾ ಅನೇಕ ಜನರು ವಾಸಿಸಲು ಮನೆಯಿಲ್ಲದೆ ಬಯಲಿನಲ್ಲಿ, ಗುಡಿಸಲಿನಲ್ಲಿ, ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರಗಳು ಬಡವರಿಗೆ ಆವಾಸ ಒದಗಿಸಬೇಕು ಎಂಬ ಉದ್ದೇಶದಿಂದ ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗವಾಗಿ ವಸತಿ ರಹಿತರಿಗೆ ಆವಾಸ ದೊರೆಯಲಿ ಎಂದು ಅರ್ಥಶಾಸ್ತ್ರ ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಆವಾಸ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯುಎನ್‍ಡಿಪಿಯು ಅಂದಾಜಿಸಿದ ಪ್ರಕಾರ ನಮ್ಮ ದೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ.10ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದು, ಮೂಲಭೂತ ಸೌಕರ್ಯಗಳು ಲಭ್ಯವಾಗಿಲ್ಲ. ಅನೇಕ ಜನರು ಕೊಳಗೇರಿ ಪ್ರದೇಶಗಳಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ಹಳ್ಳಿಗಳಲ್ಲಿ ಗುಡಿಸಲಗಳು ಕಂಡುಬರುತ್ತವೆ. ಸರ್ಕಾರಗಳು ‘ಸರ್ವರಿಗೂ ಸೂರು’ ಎಂಬ ಪರಿಕಲ್ಪನೆಯೊಂದಿಗೆ ‘ಬಸವ ವಸತಿ ಯೋಜನೆ’, ‘ಡಾ.ಬಿ.ಆರ್.ಅಂಬೇಡ್ಕರ ವಸತಿ ಯೋಜನೆ’, ‘ವಾಲ್ಮೀಕಿ ಆವಾಸ ಯೋಜನೆ’, ‘ಇಂದಿರಾ ಆವಾಸ ಯೋಜನೆ’, ‘ರಾಜೀವ ಆವಾಸ ಯೋಜನೆ’, ‘ದೇವರಾಜ ಅರಸು ವಸತಿ ಯೋಜನೆ’, ‘ವಾಜಪೇಯಿ ವಸತಿ ಯೋಜನೆ’, ‘ನಮ್ಮ ಮನೆ ವಸತಿ ಯೋಜನೆ’, ‘ಪ್ರಧಾನಮಂತ್ರಿ ಆವಾಸ ಯೋಜನೆ’, ‘ಒಂದು ಲಕ್ಷ ವಸತಿ ಯೋಜನೆ’ ಸೇರಿದಂತೆ ಅನೇಕ ವಸತಿ ಯೋಜನೆಗಳನ್ನು ಜಾರಿಗೊಳಿಸಿದೆ. ವಸತಿ ರಹಿತರು ಇವುಗಳ ಪ್ರಯೋಜನೆ ಪಡೆಯಬೇಕು ಎಂದರು.
ಪ್ರಮುಖರಾದ ಭೀಮಾಶಂಕರ ಎಸ್.ಘತ್ತರಗಿ, ಶಿವಯೋಗೆಪ್ಪಾ ಎ.ಬಿರಾದಾರ ಹಾಗೂ ವಿದ್ಯಾರ್ಥಿಗಳಿದ್ದರು.