ಕಾಳಗಿ ತಾಲೂಕಿನಲ್ಲಿ ಸಂಪೂರ್ಣತಾ ಅಭಿಯಾನ ಯಶಸ್ಸು:ನೀತಿ ಆಯೋಗ ನೀಡಿದ ಗುರಿ ಸಾಧನೆ
ಕಲಬುರಗಿ:ಅ.3:ಕೇಂದ್ರದ ನೀತಿ ಆಯೋಗವು ಗುರುತಿಸಿರುವ ದೇಶದ 500 ಹಿಂದುಳಿದ ಬ್ಲಾಕುಗಳಲ್ಲಿ ಒಂದಾಗಿರುವ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಕಳೆದ ಜುಲೈ 1 ರಿಂದ ಸೆಪ್ಟೆಂಬರ್ 30ರ ವರೆಗೆ 3 ತಿಂಗಳ ಅವಧಿಯಲ್ಲಿ ನೀತಿ ಆಯೋಗ ನೀಡಿದ 6 ಸೂಚಕಗಳ ಪೈಕಿ ಐದರಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸುವ ಮೂಲಕ ಕಾಳಗಿ ತಾಲೂಕು ಸಂಪೂರ್ಣತಾ ಅಭಿಯಾನದಲ್ಲಿ ಯಶಸ್ಸು ಕಂಡಿದೆ.
ಆರೋಗ್ಯ ಇಲಾಖೆಯ ಮೂರು ಸೂಚಕಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ. ತಾಲೂಕಿನಾದ್ಯಂತ ಮೂರು ತಿಂಗಳ ಅವಧಿಯಲ್ಲಿ 19 ಎನ್.ಸಿ.ಡಿ ಕ್ಯಾಂಪ್ ಆಯೋಜಿಸಿ ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇನ್ನಿತರ ಆರೋಗ್ಯ ತಪಾಸಣೆಗೆ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೋಷಣ ಅಭಿಯಾನದ ಮೂಲಕ ಪೌಷ್ಠಿಕಾಂಶ ಆಹಾರ ದೊರಕುವಂತೆ ಮಾಡುವಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹೆಚ್ಚು ಮುತುವರ್ಜಿ ವಹಿಸಿದ್ದರು. ಪ್ರತಿ ಮನೆಗೆ ಭೇಟಿ ನೀಡಿ ಮಹಿಳೆಯರÀ ಆರೋಗ್ಯ ವಿಚಾರಿಸಿದ್ದಾರೆ. ಸುಮಾರು 16 ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಆಯೋಜಿಸಿ ಅಪೌಷ್ಠಿಕತೆ ನಿವಾರಣೆ ಮತ್ತು ಆರೋಗ್ಯ ಸುಧಾರಣೆಗೆ ಒತ್ತು ನೀಡಲಾಗಿದೆ. 18 ಕೇಂದ್ರದಲ್ಲಿ ಅರಿವು ಮೂಡಿಸಲಾಗಿದೆ. ಇಲ್ಲಿಯೂ ಶೇ.100ರಷ್ಟು ಪ್ರಗತಿ ಕಾಣಲಾಗಿದೆ.
ಅನ್ನದಾತ ರೈತನಿಗೆ ನೆರವಾಗುವ ಉದ್ದೇಶದಿಂದ ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆದರೆ ಉತ್ತಮ ಇಳುವರಿ ಮತ್ತು ಲಾಭ ಪಡೆಯಬಹುದು ಎಂದು ಮಾಹಿತಿ ನೀಡಲು ಕೃಷಿ ಇಲಾಖೆಯು 6 ಕಾರ್ಯಕ್ರಮಗಳ ಸಂಘಟನೆ ಮಾಡಿ ಮಣ್ಣು ಪರೀಕ್ಷೆ ನಡೆಸಿ ರೈತರಿಗೆ ಸಾಯಿಲ್ ಹೆಲ್ತ್ ಕಾರ್ಡ್ ವಿತರಿಸಿ ಇಲ್ಲಿಯೂ ನೀಡಿದ ಗುರಿಯಂತೆ ಶೇ.100ರಷ್ಟು ತಲುಪಿದೆ.
ಇನ್ನು ಸ್ವ-ಸಹಾಯ ಉದ್ಯೋಗ ಕೈಗೊಳ್ಳುವ ಮಹಿಳಾ ಸ್ತ್ರಿ ಶಕ್ತಿ ಗುಂಪುಗಳಿಗೆ ಆರ್ಥಿಕ ಶಕ್ತಿ ನೀಡಲು ಆವರ್ತಕ ನಿಧಿಯಿಂದ ಪ್ರತಿ ಸಂಘಕ್ಕೆ 40 ಸಾವಿರ ರೂ. ಗಳಂತೆ ಒಟ್ಟು 8 ಲಕ್ಷ ರೂ. ಸಹಾಯಧನ ನೀಡಲು ನಿರ್ಧರಿಸಿದ್ದು, ಶೀಘ್ರದಲ್ಲಿಯೆ ಸಂಘಗಳಿಗೆ ಚೆಕ್ ನೀಡಲಾಗುತ್ತಿದೆ.
ಇನ್ನು ಕಳೆದ ಸೋಮವಾರ ಈ ಸಂಬಂಧ ಕಾಳಗಿ ಪಟ್ಟಣದಲ್ಲಿ ಜರುಗಿದ ಸಂಪೂರ್ಣ ಅಭಿಯಾನದ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಅವರು ಮಾತನಾಡಿ, ಮೂರು ತಿಂಗಳ ಪ್ರಗತಿಯ ಚಿತ್ರಕ್ಕೆ ಸಂತಸ ವ್ಯಕ್ತಪಡಿಸುತ್ತಾ ಮುಂದೇ ಸಹ ಇದೇ ರೀತಿಯಲ್ಲಿ ಪ್ರಗತಿಯತ್ತ ಸಾಗೋಣ ಎಂದು ಕರೆ ನೀಡಿ ಇತ್ತೀಚೆಗೆ ನೀತಿ ಆಯೋಗವು ಘೋಷಿಸಿದ ಡೆಲ್ಟಾ ರ್ಯಾಂಕ್-2024ರಲ್ಲಿ ದಕ್ಷಿಣ ಭಾರತ ವಲಯದಡಿ ಕಾಳಗಿ ತಾಲೂಕು ಎರಡನೇ ರ್ಯಾಂಕ್ ಪಡೆದಿರುವುದಕ್ಕೆ ಅಧಿಕಾರಿ ಮತ್ತು ಫಲಾನುಭವಿಗಳೊಂದಿಗೆ ಸಂತಸ ಹಂಚಿಕೊಂಡರು.
ದೇಶದಾದ್ಯಂತ 500 ಹಿಂದುಳಿದ ಬ್ಲಾಕುಗಳನ್ನು ಮಹತ್ವಾಕಾಂಕ್ಷೆ ತಾಲೂಕುಗಳೆಂದು ಗುರುತಿಸಿ ಇಲ್ಲಿ ಶಿಕ್ಷಣ, ಆರೋಗ್ಯ, ಕೌಶಲ್ಯ, ಕೃಷಿ, ಮೂಲಸೌಕರ್ಯ ಬಲವರ್ಧನೆ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆಗೆ ಪ್ರಸಕ್ತ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ತರಲು ಒತ್ತು ನೀಡುತ್ತಿದೆ. ವಿಶೇಷವಾಗಿ ಜನರಿಗೆ ಸರ್ಕಾರಿ ಯೋಜನೆಗಳ ಅರಿವು ಮತ್ತು ಜನರ ಭಾಗೀದಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಇದರಡಿ ಜಿಲ್ಲೆಯ ಕಾಳಗಿ, ಶಹಾಬಾದ, ಅಫಜಲಪೂರ ತಾಲೂಕುಗಳು ಆಯ್ಕೆಯಾಗಿವೆ.
ಒಟ್ಟಾರೆಯಾಗಿ ಕಾಳಗಿ ತಾಲೂಕಿನಲ್ಲಿ ಶಿಕ್ಷಣ, ಆರೋಗ್ಯ, ಕೌಶಲ್ಯ, ಕೃಷಿ, ಮೂಲಸೌಕರ್ಯ ಬಲವರ್ಧನೆ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆ ನಿಟ್ಟಿನಲ್ಲಿ ಸಂಪೂರ್ಣತಾ ಅಭಿಯಾನ ನಿಗದಿಯಂತೆ ಗುರಿ ತಲುಪಲು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮತ್ತು ಎ.ಬಿ.ಪಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಶರಣಯ್ಯ ಎಸ್. ಮಠಪತಿ, ತಾಲೂಕ ಪಂಚಾಯತ್ ಇ.ಓ. ಬಸಲಿಂಗಪ್ಪ ಡಿಗಿ, ತಾಲೂಕಿನ ಎ.ಬಿ.ಪಿ. ಫೆಲೋ ಶಿವರಾಜ ಹೋಳ್ಕರ್ ಸೇರಿದಂತೆ ಇಡೀ ತಾಲೂಕು ಆಡಳಿತ ಶ್ರಮ ಸಹ ಅಡಗಿದೆ.