ಔರಾದ್ ಪಟ್ಟಣ ಪಂಚಾಯತಿಗೆ ಅವಿರೋಧ ಆಯ್ಕೆಅಧ್ಯಕ್ಷರಾಗಿ ಸರುಬಾಯಿ ಘೂಳೆ, ಉಪಾಧ್ಯಕ್ಷರಾಗಿ ರಾಧಾಬಾಯಿ ನರೋಟೆ ಆಯ್ಕೆ
ಔರಾದ್ :ಸೆ.8: ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎರಡನೇ ಅಧಿಕಾರದ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಸರುಬಾಯಿ ವೈಜಿನಾಥ ಘುಳೆ ಅಧ್ಯಕ್ಷೆ ಹಾಗೂ ರಾಧಾಬಾಯಿ ಕೃಷ್ಣ ನರೋಟೆ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ)ಗೆ ಮೀಸಲಾಗಿತ್ತು. ಒಟ್ಟು 20 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಎರಡನೇ ಅವಧಿಗೂ ಮೀಸಲಾತಿಯಂತೆ ಮಹಿಳೆಯರೇ ಅಧಿಕಾರ ಪಡೆದರು.
ಪಂಚಾಯಿತಿಯಲ್ಲಿ 20 ವಾರ್ಡ್‍ಗಳಿದ್ದು, ಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ 12 ಬಿಜೆಪಿ, 6 ಕಾಂಗ್ರೆಸ್ ಹಾಗೂ 2 ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು.
ಬಳಿಕ ಕಾಂಗ್ರೆಸ್‍ನ ಧೋಂಡಿಬಾ ನರೋಟೆ, ರಾಧಾಬಾಯಿ, ಗುಂಡಪ್ಪ ಮುದಾಳೆ, ಸರುಬಾಯಿ ಘುಳೆ ಅವರು ಬಿಜೆಪಿ ಪಕ್ಷಕ್ಕೆ ಮತ್ತು ಸುನೀಲಕುಮಾರ ದೇಶಮುಖ ಅವರು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು.
ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಒಟ್ಟು 20 ಜನ ಸದಸ್ಯರಲ್ಲಿ 15 ಮತಗಳು ಪಡೆದು ಅವಿರೋಧವಾಗಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ಇರ್ವರು ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.