ಡೆಂಗೂ ನಿಯಂತ್ರಣಕ್ಕೆ ಅಂತರ್ ಇಲಾಖೆಗಳು ಸಮನ್ವಯತೆ ಸಾಧಿಸಲು ಡಿ.ಸಿ. ಸೂಚನೆ
ಕಲಬುರಗಿ:ಸೆ.8: ಶುಕ್ರವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು, ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಕಲಬುರಗಿ ಮಹಾನಗರದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಇದೇ ಸೆಪ್ಟೆಂಬರ್ 10, 11, 13, 18, 20 ಹಾಗೂ 21 ರಂದು ಲಾರ್ವಾ ಸಮೀಕ್ಷೆಯನ್ನು ಮಿಷನ್ ಮೋಡ್‍ನಲ್ಲಿ ಆಯೋಜಿಸಬೇಕು. ಇದಕ್ಕೆ ಎಲ್ಲಾ ಅಧಿಕಾರಿಗಳ ಸಹಕಾರ ಅಗತ್ಯ ಎಂದು ಪ್ರತಿಪಾದಿಸಿದ ಅವರು, ಮನೆ, ಕಚೇರಿ ಸುತ್ತ ಪರಿಸರ ಸ್ವಚ್ಚತೆ, ನೈರ್ಮಲ್ಯ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಇದನ್ನು ಸಾರ್ವಜನಿಕರಿಗೆ ತಿಳಿಹೇಳುವ ಕೆಲಸ ಅಧಿಕಾರಿಗಳು-ಸಿಬ್ಬಂದಿ ಮಾಡಬೇಕಿದೆ ಎಂದು ಒತ್ತಿ ಹೇಳಿದರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಬಸವರಾಜ ಗೂಳಿ ಅವರು ಮಾತನಾಡಿ, ಕಳೆದ 2 ತಿಂಗಳಿಂದ ಜಿಲ್ಲೆಯಲ್ಲಿ ತುಂತುರು ಮಳೆ ಆಗುತ್ತಿದ್ದು, ಇದು ಈಜಿಪ್ಟ್ ಇಡಿಸ್ ಸಂತತಿ ಉತ್ಪತ್ತಿಗೆ ಉತ್ತಮ ಹವಾಮಾನವಾಗಿ ಮಾರ್ಪಟ್ಟಿದೆ. ಇದರಿಂದ ಮನೆಯ ಹೊರಾಂಗಣಗಳಲ್ಲಿ ನಿರುಪಯುಕ್ತ ತ್ಯಾಜ್ಯಗಳಾದ ಟೈರ್, ಎಳೆನೀರಿನ ಚಿಪ್ಪು, ಸಿಮೆಂಟ್ ತೊಟ್ಟಿ, ಮಡಿಕೆಗಳಲ್ಲಿ ಮಳೆ ನೀರು ನಿಲ್ಲುವುದರಿಂದ ಈಡೀಸ್ ಸೊಳ್ಳೆ ಉತ್ಪತ್ತಿಗೆ ಕಾರಣವಾಗಿದ್ದು, ಇದರ ನಾಶ ಮಾಡಬೇಕಿದೆ ಎಂದರು.
ಜಿಲ್ಲೆಯಾದ್ಯಂತ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಪ್ರತಿ ವಾರದ ಮಂಗಳವಾರ ಮತ್ತು ಶುಕ್ರವಾರ ದಿನಗಳಂದು ಪ್ರತಿ ಮನೆ ಮನೆಗಳಿಗೆ ತೆರಳಿ ಲಾರ್ವ ಸಮೀಕ್ಷೆ ನಡೆಸುತ್ತಿದ್ದಾರೆ ಎಂದ ಅವರು, ಡೆಂಗ್ಯೂ ಖಚಿತ ಪ್ರಕರಣಗಳಲ್ಲಿ ರೋಗಿಯ ಮನೆ ಭೇಟಿ ನೀಡಿ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ಲಾರ್ವಾ ಮೂಲ ತಾಣಗಳನ್ನು ನಾಶಪಡಿಸಲು ಜಿಲ್ಲೆಯ 117 ಕಲ್ಲಿನ ಕಣಿ, ಬಾವಿ, ಕಲ್ಯಾಣಿ ಸೇರಿದಂತೆ ಮುಂತಾದ ಕಡೆ ಗಪ್ಪೆ ಮೀನು ಬಿಡಲಾಗಿದೆ. ಕಲಬುರಗಿ ನಗರ ಪ್ರದೇಶಗಳಲ್ಲಿ ನೀರು ನಿಂತ ಖಾಲಿ ನಿವೇಶನಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಃಖಿI ಸಿಂಪರಣೆ ಕಾರ್ಯ ಮಾಡಲಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ, ಪ್ರೋಬೇಷನರಿ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ, ಮಹಾನಗರ ಪಾಲಿಕೆ ವಲಯ ಆಯುಕ್ತ ರಮೇಶ ಪಟ್ಟೇದಾರ, ಡಿ.ಡಿ.ಪಿ.ಐ ಸೂರ್ರ್ಯಕಾಂತ ಮದಾನೆ, ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ರಾಜುಕುಮಾರ ರಾಠೋಡ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.