ಜನರನ್ನು ಒಡೆದಾಳುವುದೇ ಬಿಜೆಪಿ ಸಾಧನೆ
ಹುಮನಾಬಾದ್ :ಸೆ.8: ಜನ ಸಮುದಾಯವನ್ನು ಒಡೆದು ಆಳುವುದೇ ಬಿಜೆಪಿ ನಾಯಕರ ಬಹುದೊಡ್ಡ ಸಾಧನೆಯಾಗಿದೆ ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಮಾಜಿ ಸಚಿವ ದಿ. ಬಸವರಾಜ ಪಾಟೀಲ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸಂಸದ ಸಾಗರ ಖಂಡ್ರೆ, ಎಂಎಲ್ಸಿ ಡಾ. ಚಂದ್ರಶೇಖರ ಪಾಟೀಲ್ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲಗೆ ಶನಿವಾರ ಆಯೋಜಿಸಿದ್ದ ಅಭಿನಂದಾನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹುಮನಾಬಾದ್ ನ ಪಾಟೀಲ್ ಪರಿವಾರ ಹಾಗೂ ಭಾಲ್ಕಿಯ ಖಂಡ್ರೆ ಪರಿವಾರದ ಕೊಡುಗೆ ಅಪಾರವಾಗಿದೆ. ಈ ಪರಿವಾರಗಳ ಹಿರಿಯರ ಮಾರ್ಗದರ್ಶನದಲ್ಲಿ ಈಗಿನ ಪೀಳಿಗೆಗಳು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮ ತಾವು ತೊಡಗಿಸಿಕೊಂಡು ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಸಚಿವ ರಹಿಂಖಾನ್ ಮಾತನಾಡಿ, ಹುಮನಾಬಾದ್ ಪಟ್ಟಣದಲ್ಲಿ ಮಾಜಿ ಸಚಿವ ದಿ. ಬಸವರಾಜ ಪಾಟೀಲ್ ಪರಿವಾರಕ್ಕೆ ವಿಶೇಷ ಸ್ಥಾನಮಾನ ವಿದೆ. ಹೀಗಾಗಿ ಯಾರೇ ಈ ಪರಿವಾರದ ಬಗ್ಗೆ ಮಾತನಾಡುವ ಮೊದಲು ಯಾರ ಪರಿವಾರದ ವಿರುದ್ಧ ಮಾತನಾಡುತ್ತಿದ್ದೇನೆ ಎಂಬುವುದು ಅರ್ಥ ಮಾಡಿಕೊಂಡು ಮಾತನಾಡಿದರೆ ಒಳಿತು ಎಂದು ಹೇಳಿದರು.
ಸಂಸದ ಸಾಗರ ಖಂಡ್ರೆ ಮಾತನಾಡಿ, ಹುಮನಾಬಾದ್ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸನ್ಮಾನ ಮಾಡಿರುವುದು ನನ್ನ ಜೀವನದಲ್ಲಿ ಎಂದು ಮರೆಯುವಂತಿಲ್ಲ. ನಿಮ್ಮೆಲ್ಲರ ಪ್ರೀತಿ, ಕಾಳಜಿಗೆ ಸದಾ ಋಣಿಯಾಗಿದ್ದು, ಕ್ಷೇತ್ರದ ಜನರ ಕಲ್ಯಾಣಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ರಾಜಕೀಯ ಜೀವನದಲ್ಲಿ ನಾನು ಏಳು ಬೀಳು ಕಂಡಿದ್ದೇನೆ. ಆದರೆ ನಮ್ಮ ಪಾಟೀಲ್ ಪರಿವಾರದ ವಿರುದ್ಧ ಇಲ್ಲ ಅಲ್ಲದ ಅಪಪ್ರಚಾರ ಮಾಡುತ್ತಿರುವ ಹುಮನಾಬಾದ್ ಶಾಸಕ ಡಾ. ಸಿದ್ದು ಪಾಟೀಲ್ ಗೆ ಸಮಯವೇ ಉತ್ತರ ನೀಡುತ್ತದೆ. ಹುಟ್ಟುವಾಗ ಒಬ್ಬನೇ ಬಂದಿದ್ದೇನೆ, ಸತ್ತ ಮೇಲೆಯೂ ಒಬ್ಬನೇ ಹೋಗುವೆ ಜೀವನದಲ್ಲಿ ನನಗೆ ಯಾರ ಭಯವೂ ಇಲ್ಲ. ಹೀಗಾಗಿ ನನ್ನ ಜೀವನದ ಕೊನೆಯ ವರೆಗೂ ಜನರ ಸೇವೆ ಮಾಡುವುದೇ ಬಹುಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್, ವಿಧಾನ ಪರಿಷತ ಸದಸ್ಯ ಭೀಮರಾವ ಪಾಟೀಲ್, ಜಿಪಂ. ಮಾಜಿ ಸದಸ್ಯ ವೀರಣ್ಣ ಪಾಟೀಲ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಮಾಲಾ ಬಿ. ನಾರಾಯಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಮಾಜಿ ಎಂಎಲ್ಸಿ ಅರವಿಂದಕುಮಾರ ಅರಳಿ, ಮಾಜಿ ಎಂಎಲ್ಸಿ ವಿಜಯ ಸಿಂಗ್, ಅಮೃತರಾವ ಚಿಮ್ಮಕೋಡೆ, ಬಸವರಾಜ ಜಾಬಶಟ್ಟಿ, ಅಫ್ಸರಮಿಯ, ಲಕ್ಷ್ಮಣರಾವ ಬುಳ್ಳಾ,ದತ್ತಕುಮಾರ ಚಿದ್ರ, ಮಲ್ಲಿಕಾರ್ಜುನ್ ಮಾಳಶಟ್ಟಿ, ಬಾಬು ಟೈಗರ್, ವೀರಪ್ಪ ಧುಮ್ಮನಸೂರ್, ಮಲ್ಲಿಕಾರ್ಜುನ್ ಮಹೇಂದ್ರಕರ್, ಪ್ರಕಾಶ ತಾಳಮಡಗಿ ಓಂಕಾರ್ ತುಂಬಾ, ಇದ್ದರು.