ಒಳಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ನಾಳೆ ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೮; ಸುಪ್ರೀಂ ಕೋರ್ಟ್ ನ ೭ ನ್ಯಾಯಾಧೀಶರ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಾಳೆ ಬೆಳಗ್ಗೆ ೧೧ ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ್ ಕುಂದುವಾಡ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಳೆ ಬೆಳಗ್ಗೆ ೧೧ ಕ್ಕೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದರು. ಪರಿಶಿಷ್ಠ ಜಾತಿಗಳ ಮೀಸಲಾತಿಯು 101 ಪರಿಶಿಷ್ಟ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಪರಿಶಿಷ್ಟರ ಮೀಸಲಾತಿಯನ್ನು 4 ಗುಂಪುಗಳನ್ನಾಗಿ ವರ್ಗೀಕರಣ ಮಾಡಲು ಒತ್ತಾಯಿಸಿ 3 ದಶಕಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಿಸಿ ಒಳಮೀಸಲಾತಿ ಕಲ್ಪಿಸಲು ಒತ್ತಾಯಿಸಿ ನಡೆಸಿದ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ 2004ರಲ್ಲಿ ನಿ. ನ್ಯಾ ಎ.ಜೆ. ಸದಾಶಿವ ಆಯೋಗ ರಚಿಸಿತು. ಆಯೋಗ ಸರ್ಕಾರಕ್ಕೆ  14-06-2012ರಂದು ವರದಿ ಸಲ್ಲಿಸಿತು. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.ಹೀಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಸಹ ಪರಿಶಿಷ್ಠರ ಮೀಸಲಾತಿ ವರ್ಗೀಕರಣ ಮಾಡುವ ನಿರ್ಣಯವನ್ನು ಸಚಿವ ಸಂಪುಟ ‘ದಲ್ಲಿ ಅನುಮೋದಿಸಿ  17-03-2024ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕಾಗಿ ವಿವಿಧ ರಾಜ್ಯಗಳ ಆಯೋಗದ ವರದಿಗಳು ಮತ್ತು ಕೋರ್ಟ್‌ಗಳ ಹಲವು ತೀರ್ಪುಗಳನ್ನು ಪರಾಮರ್ಶಿಸಿದ ಸುಪ್ರೀಂಕೋರ್ಟ್‌ನ 7 ನ್ಯಾಯಾಧೀಶರ ಸಂವಿಧಾನ ಪೀಠ  “ಐತಿಹಾಸಿಕ ತೀರ್ಪು” ನೀಡಿತ್ತು. ಈ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡುವ ಸಂವಿಧಾನಬದ್ಧ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ತೀರ್ಪು ನೀಡಿದೆ.ಆದ್ದರಿಂದ ಸುಪ್ರೀಂ ಕೋರ್ಟ್‌ 7 ನ್ಯಾಯಾಧೀಶರ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಹೆಚ್.ಕೊಟ್ರೇಶ್,ಹರೀಶ್ ಅಜ್ಜಂಪುರ,ಹೆಚ್.ಅಣ್ಣಪ್ಪ ಸ್ವಾಮಿ,ಕೊಟ್ರೇಶ್ ಉಪಸ್ಥಿತರಿದ್ದರು.