ಪದ್ಮಾಂಜಲಿ ಶಾಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಯ ಕುರಿತು ಜಾಗೃತಿ
ವಿಜಯಪುರ,ಸೆ.8: ಗಣಪತಿ ಹಬ್ಬವನ್ನು ನಾವೆಲ್ಲರೂ ಪರಿಸರ ಸ್ನೇಹಾತ್ಮಕವಾಗಿ ಆಚರಣೆ ಮಾಡುವ ಮೂಲಕ ಹಬ್ಬವನ್ನು ಅರ್ಥಪೂರ್ಣಗೊಳಿಸಬೇಕಿದೆ ಎಂದು ವಿಶ್ರಾಂತ ಪ್ರಾಚಾರ್ಯ ಪೆÇನ್ನಪ್ಪ ಕಡೆಮನಿ ಹೇಳಿದರು.
ನಗರದ ಪದ್ಮಾಂಜಲಿ ಶಾಲೆಯಲ್ಲಿ ಜರುಗಿದ ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆಯ ಜಾಗೃತಿ ಹಾಗೂ ಅರಿವನ್ನು ಮೂಡಿಸಲು ಪಾಲಕರಿಗಾಗಿ ಹಣ್ಣು ಮತ್ತು ತರಕಾರಿಗಳಿಂದ ಗಣೇಶನನ್ನು ತಯಾರಿಸುವ ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಿ ಮಾತನಾಡಿದರು.
ಇನ್ನೋರ್ವ ನಿರ್ಣಾಯಕರಾದ ನಿವೃತ್ತ ಉಪನ್ಯಾಸಕ ವಿದ್ಯಾಧರ ಸಾಲಿ ಮಾತನಾಡಿ, ಗಣಪತಿಯನ್ನು ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಅತಿಯಾದ ರಾಸಾಯನಿಕ ಅಲಂಕಾರಿಕ ಬಣ್ಣಗಳಿಗಿಂತ ಪ್ರಾಕೃತಿಕ ಬಣ್ಣಗಳಿಂದ ರಂಗೋಲಿ ರಚಿಸುವುದು ಉತ್ತಮ. ಪರಿಸರಾತ್ಮಕವಾಗಿರುವ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಿ. ಇದು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಶೈಲಶ್ರೀ ರಾಠೋಡ-ಪ್ರಥಮ, ಅರ್ಚನಾ ಚಂಡು-ದ್ವಿತೀಯ, ಮೇಘಾ ಬನಸೋಡೆ-ತೃತೀಯ, ನೀಲಾ-ಚತುರ್ಥ ಸ್ಥಾನ ಪಡೆದು ಕ್ರಮವಾಗಿ 2000,1000,500,200 ನಗದು ಬಹುಮಾನ ಪಡೆದು ಗಮನ ಸೆಳೆದರು.
ಸಂಸ್ಥೆಯ ಅಧ್ಯಕ್ಷ ಡಾ. ಜಿ.ಟಿ. ಪಾಟೀಲ, ಮುಖ್ಯ ಶಿಕ್ಷಕಿ ಆರ್.ಆರ್. ಕೋರೆ, ಎ.ಎಂ. ಸೊನ್ನಗಿ, ಶಿಕ್ಷಕಿ ಪ್ರೀತಿ ಮದಭಾವಿ ಸೇರಿದಂತೆ ಶಾಲಾ ಶಿಕ್ಷಕರು, ಮಹಿಳಾ ಪಾಲಕರು ಉಪಸ್ಥಿತರಿದ್ದರು.