ಸಡಗರ-ಸಂಭ್ರಮದ ಗಣೇಶ ಚತುರ್ಥಿ
ವಿಜಯಪುರ.ಸೆ೮:ಗಣೇಶನ ಹಬ್ಬದ ಪ್ರಯುಕ್ತ ಪಟ್ಟಣದೆಲ್ಲೆಡೆ ಹಲವು ವಿನಾಯಕ ದೇವಾಲಯಗಳಲ್ಲಿ ವಿಶೇಷ ಪೂಜೆ, ಏರ್ಪಡಿಸಿದ್ದುದಲ್ಲದೇ, ಪಟ್ಟಣದ ನೂರಾರು ಕಡೆ ಸಂಘ-ಸಂಸ್ಥೆಗಳು ವಿನಾಯಕನನ್ನು ಪ್ರತಿಷ್ಟಾಪಿಸಿ, ಪೂಜಾ ಕಾರ್ಯಗಳನ್ನು ಏರ್ಪಡಿಸಿದ್ದರು.
ಪಟ್ಟಣದ ಹಳೆಯ ಪುರಸಭೆ ಮುಂಭಾಗದ ಅಶ್ವತ್ಥ ಕಟ್ಟೆ ಹಾಗೂ ನಾಗರಕಲ್ಲು, ನಾಗರಕೆರೆ ಬಳಿಯಲ್ಲಿನ ನಾಗರಕಲ್ಲು, ಅಶೋಕ ನಗರದಲ್ಲಿನ ನಾಗರಕಲ್ಲು, ಮತ್ತಿತರೆಡೆ ಅಬಾಲ ವೃದ್ದರಾದಿಯಾಗಿ ನೂತನ ವಸ್ತ್ರಗಳನ್ನು ಧರಿಸಿ, ಮಡಿಯಿಂದ ಹೋಗಿ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿ, (ತೆಂಗಿನ ಕಾಯಿ ಹೊಡೆಯುವುದು ವಿಶೇಷ)ಸಮೀಪದಲ್ಲಿನ ಹುತ್ತಗಳಿಗೆ ಪೂಜೆ ಸಲ್ಲಿಸಿ, ಹಾಲೆರೆದು, ಮನೆಗಳಲ್ಲಿ ಸಿಹಿ ಹಾಗೂ ಕಾರದ ಕಡುಬುಗಳ ಔತಣ ನಡೆಸುತ್ತಿದ್ದುದು ವಿಶೇಷವಾಗಿತ್ತು.
ವಿಘ್ನವಿನಾಯಕ ಗಣೇಶನ ಬಗ್ಗೆ ಸಾರ್ವಜನಿಕರಲ್ಲಿ ಅಪಾರ ಭಯ, ಭಕ್ತಿ ಇದ್ದು, ಯಾವುದೇ ಕಾರ್ಯ ಕೈಗೊಳ್ಳುವ ಮೊದಲು ಪ್ರಥಮ ಪೂಜೆ ಸ್ವೀಕರಿಸುವ ವಿನಾಯಕನು ತಮ್ಮ ಜೀವನದಲ್ಲಿ ಯಾವುದೇ ವಿಘ್ನಗಳನ್ನು ತಂದೊಡ್ಡದಿರಲೆಂದು ಭಯ, ಭಕ್ತಿಗಳಿಂದ ಪೂಜೆ ಸಲ್ಲಿಸಿದರು.
ಇಲ್ಲಿನ ಗಾಂಧಿ ಚೌಕದಲ್ಲಿನ ಅಯೋಧ್ಯಾನಗರ ಶಿವಾಚಾರವೈಶ್ಯ ನಗರ್ತ ಅಸ್ಥಾನ ಭವನದಲ್ಲಿ, ಶ್ರೀವಿನಾಯಕ ಭಕ್ತ ಮಂಡಳಿ ವತಿಯಿಂದ ೮೯ ನೇ ವರ್ಷದ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಿಂಹಾಸನಾರೂಢನಾಗಿ ಕುಳಿತ ಬೃಹತ್ ವಿನಾಯಕ ಸ್ವಾಮಿಯ ವಿಗ್ರಹವನ್ನು ಪತಿಷ್ಟಾಪಿಸಲಾಗಿದ್ದು, ಸುತ್ತ ಹತ್ತೂರುಗಳ ಜನರ ಮನಸೂರೆಗೊಂಡಿತು.
ಇಲ್ಲಿನ ೧ ನೇ ವಾರ್ಡ್‌ನ ಅಶೋಕ ನಗರದಲ್ಲಿನ ಚೈತನ್ಯ ವಿನಾಯಕ ಯುವಕರ ಬಳಗವು ಸರಕಾರಿ ಕಿರಿಯ ಕಾಲೇಜಿನ ಆಟದ ಮೈದಾನದ ಬಳಿ, ಹಾಲಿನ ಡೇರಿ ರಸ್ತೆಯಲ್ಲಿ ವೇದಗಣಪತಿ, ಕುಳ್ಳಿರಿಸಿದ್ದು, ಮಾರ್ಕೆಟ್ ರಸ್ತೆಯಲ್ಲಿ, ಗುರಪ್ಪನ ಮಠದ ಓಂಕಾರೇಶ್ವರ ಸ್ವಾಮಿ ದೇವಾಲಯದಲ್ಲಿ, ಕೋಟೆ ಬೀದಿಯ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ, ನವಗ್ರಹ ವೃತ್ತದ ಬಳಿ, ಸಂತೆ ಬೀದಿಯ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ, ಬಸವೇಶ್ವರ ನಗರದ ಶ್ರೀ ವಿಜಯ ವಿನಾಯಕಸ್ವಾಮಿ ದೇವಾಲಯದಲ್ಲಿ, ದೇವನಹಳ್ಳಿ ರಸ್ತೆಯ ಎಚ್.ಪಿ ಗ್ಯಾಸ್ ಬಳಿ, ಹೀಗೆ ಪಟ್ಟಣದೆಲ್ಲೆಡೆ ವಿವಿಧ ಆಕಾರಗಳ ವಿನಾಯಕಸ್ವಾಮಿಯನ್ನು ಕುಳ್ಳಿರಿಸಲಾಗಿತ್ತು.
೩ ದಿನಗಳಿಂದ ೧೫ ದಿನಗಳ ಕಾಲ ಶ್ರೀ ಸ್ವಾಮಿಯವರಿಗೆ ವಿಶೇಷ ಪೂಜೆಯೊಂದಿಗೆ ಹಲವೆಡೆ ಸಂಜೆ ಸಮಯದಲ್ಲಿ ಹರಿಕಥೆ, ಗೀತಗಾಯನ, ವೇಷ, ಭೂಷಣ, ಸಂಗೀತ ಸಂಜೆ, ಜಾನಪದ ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.