ಸಮಾಜಕ್ಕೆ ರಾಜೇಂದ್ರ ಶ್ರೀಗಳ ಕೊಡುಗೆ ಅಪಾರ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.08:- ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಹಾದಿಯಲ್ಲೇ ಶಿವರಾತ್ರಿ ರಾಜೇಂದ್ರ ಶ್ರೀಗಳು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರು ಶರಣ ಮಂಡಳಿ ವತಿಯಿಂದ ಇಂಜಿನಿಯರ್ಸ್ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ಜಯಂತಿ ಹಾಗೂ ರಾಜೇಂದ್ರ ಶ್ರೀ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ, ಸಾಹಿತ್ಯ, ಕಲೆ, ಸಂಗೀತ ಬೆಳವಣಿಗೆಗೆ ಶ್ರೀಗಳ ಕೊಡುಗೆ ಅಪಾರ. ಗ್ರಾಮಾಂತರ ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳನ್ನು ತೆರೆದು ವಿದ್ಯಾದಾನ ಮಾಡಿದರು. ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು ಹಲವು ಯೋಜನೆ ರೂಪಿಸಿದ್ದರು ಎಂದರು.
ಎಲ್ಲರೂ ಗುರು ಆಗಲು ಸಾಧ್ಯವಿಲ್ಲ. ಗುರುವೇ ಸಾಕ್ಷಾತ್ ದೇವರು. ರಾಜೇಂದ್ರ ಶ್ರೀಗಳು ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ನೀಡುವ ಕೆಲಸ ಮಾಡಿದರು. ಬಡತನವನ್ನು ಕಣ್ಣಾರೆ ಕಂಡಿದ್ದ ಅವರು ಬಡವರ ಮಕ್ಕಳು ಕೂಡ ವಿದ್ಯಾವಂತರಾಗಬೇಕು. ಸಮಾಜದಲ್ಲಿ ಸಮಾನತೆ ಬರಬೇಕು ಎಂಬ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ರಾಜೇಂದ್ರ ಶ್ರೀಗಳ ಜಯಂತಿ ಸಂದರ್ಭದಲ್ಲಿ ಅವರ ಹೆಸರಲ್ಲಿ ಸಮಾಜದ ನಾನಾ ಕ್ಷೇತ್ರದಲ್ಲಿ ಸಾಧನೆ ಗೈದವರಿಗೆ ಅವರ ಹೆಸರಲ್ಲಿ ಪ್ರಶಸ್ತಿ ನೀಡಿರುವುದು ಖುಷಿಯ ವಿಚಾರ. ಇಲ್ಲಿ ಪ್ರಶಸ್ತಿ ಪಡೆದವರು ಕೂಡ ಶ್ರೀಗಳ ಮಾದರಿಯಲ್ಲಿ ಸಮಾಜಸೇವೆ ಮಾಡಲಿ ಎಂದರು.
ಇಂದಿನ ಸಮಾಜ ಸಾಕಷ್ಟು ಕೊಳಕಾಗಿದೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ನಂಬಿಕೆ, ಧೈರ್ಯ ಕಾಣಬಹುದಾಗಿದೆ ಎಂದರು.
ಇದೇ ವೇಳೆ ಪೆÇ್ರ.ಜಯಪ್ರಕಾಶಗೌಡ (ಸಂಘಟನೆ), ಡಾ.ಧರಣಿದೇವಿ ಮಾಲಗತ್ತಿ (ಆಡಳಿತ), ಎಂ.ರಾಮಪ್ಪ (ಶಿಕ್ಷಣ), ಟಿ.ಜಿ.ಆದಿಶೇಷಗೌಡ (ಶಿಕ್ಷಣ), ರವಿಶಾಸ್ತ್ರಿ (ಉದ್ಯಮ), ರಾಮಚಂದ್ರ (ಸಮಾಜಸೇವೆ) ಅವರಿಗೆ ರಾಜೇಂದ್ರ ಶ್ರೀ ಸೇವಾ ಪ್ರಶಸ್ತಿ-2024 ಪ್ರದಾನ ಮಾಡಲಾಯಿತು.
ರಾಜೇಂದ್ರ ಶ್ರೀಗಳ ಜೀವನ ಮತ್ತು ಸಾಧನೆ ವಿಷಯ ಕುರಿತು ಸುತ್ತೂರಿನ ಜೆಎಸ್‍ಎಸ್ ಸಂಸ್ಥೆಯ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಉಪನ್ಯಾಸ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ಶರಣ ಮಂಡಳಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಗೌ.ಅಧ್ಯಕ್ಷ ಯು.ಎಸ್.ಶೇಖರ್, ಪ್ರಧಾನ ಸಂಚಾಲಕ ಎಂ.ಚಂದ್ರಶೇಖರ್, ಉಪಾಧ್ಯಕ್ಷ ಎ.ಸಿ.ಜಗದೀಶ್, ಸಮಾಜ ಸೇವಕಾರದ ಮಂಜುನಾಥ್, ಜೈ ಶಂಕರ್ ಇದ್ದರು.