ಪಾಲಿಕೆ ಕಚೇರಿ ಸಭಾಂಗಣದಲ್ಲಿ ರಾತ್ರೋರಾತ್ರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೮ :ವಿಜಯಪುರ ಮಹಾನಗರ ಪಾಲಿಕೆಯ ಕೆಲ ಹಾಲಿ ಹಾಗೂ ಮಾಜಿ ಸದಸ್ಯರು ನಡು ರಾತ್ರಿಯಲ್ಲಿ ಪಾಲಿಕೆ ನೂತನ ಕಟ್ಟಡದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಪ್ರತಿ ವರ್ಷ ಪಾಲಿಕೆಯಲ್ಲಿ ಗಣೇಶ ಚತುರ್ಥಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಪಿಸಿ ಆಚರಣೆ ಮಾಡಲಾಗುತ್ತಿತ್ತು. ಆಗ ಎಲ್ಲ ಸಿಬ್ಬಂದಿಗಳ ಒಂದು ದಿನದ ವೇತನ ಹಬ್ಬಕ್ಕೆ ನೀಡಲಾಗುತ್ತಿತ್ತು.
ಗಣಪನ ಮೂರ್ತಿ ಪ್ರತಿಷ್ಠಪಿಸಿ, ಸತ್ಯ ನಾರಾಯಣ ಪೂಜೆ ಹಾಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿತ್ತು.ಆದರೆ ಈ ಬಾರಿ ಪಾಲಿಕೆಯವರು ಗಣಪತಿ ಹಬ್ಬದ ಆಚರಣೆ ಮಾಡಿಲ್ಲ. ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಮೇಯರ್ ಮೆಹಜಬೀನ್ ಹೊರ್ತಿ, ಉಪ ಮೇಯರ್ ದಿನೇಶ ಹಳ್ಳಿ ಈ ಸಂಬAಧ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪಾಲಿಕೆಯ ಬಿಜೆಪಿ ಸದಸ್ಯರು ಆರೋಪಿಸಿ ಗಣಪತಿ ಮೂರ್ತಿಯನ್ನು ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದಾರೆ.
ಪಾಲಿಕೆಯ ಸದಸ್ಯರಾದ ರಾಹುಲ್ ಜಾಧವ, ಕಿರಣ ಪಾಟೀಲ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಗಡಗಿ, ರಾಜಶೇಖರ ಮಗಿಮಠ, ಬಂದೇನವಾಜ್ ಬೀಳಗಿ, ಜಮೀರ್ ಬಾಂಗಿ, ಜವಾಹರ ಗೋಸಾವಿ, ಮಾಜಿ ಸದಸ್ಯ ರಾಜೇಶ ದೇವಗಿರಿ ಹಾಗೂ ಇತರರಿಂದ ಶಾಸ್ತ್ರೋಕ್ತವಾಗಿ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಹಿಂದೆ ಪಾಲಿಕೆಯ ನೆಲ ಮಹಡಿಯ ಪ್ರವೇಶ ದ್ವಾರದ ಎದುರು ಗಣೇಶ ಮೂರ್ತಿ ಪ್ರತಿಷ್ಟಾಪಿಸಲು ಜಿಬಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಕಳೆದ ಜುಲೈನಲ್ಲಿ ಅಂಬೇಡ್ಕರ್ ಮೂರ್ತಿ ಇಡಲಾಗಿತ್ತು.
ಇದು ವಿವಾದಕ್ಕೆ ಕಾರಣವಾಗಿತ್ತು.
ನಂತರ ಅಂಬೇಡ್ಕರ್ ಹಾಗೂ ಇತರೆ ಮಹಾನ್ ನಾಯಕರ ಮೂರ್ತಿ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿ ವಿವಾದಕ್ಕೆ ತೆರೆ ಎಳೆಯಲಾಗಿತ್ತು.
ಈಗ ಪಾಲಿಕೆಯ ಕೆಲ ಹಾಲಿ ಹಾಗೂ ಮಾಜಿ ಸದಸ್ಯರು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದು, ಇದು ಮುಂದೆ ಯಾವ ಸ್ವರೂಪ ಪಡೆಯುತ್ತದೆಯೋ ಎನೋ ಎಂದು ಎಲ್ಲರೂ ಕಾದು ನೋಡುವಂತಾಗಿದೆ.