ಅಪೌಷ್ಠಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ಸಹಭಾಗೀದಾರ ಇಲಾಖೆಯವರು ಕೈಜೋಡಿಸಬೇಕು:ನ್ಯಾ.ಪ್ರಕಾಶ ಅರ್ಜುನ ಬನಸೊಡೆ
ಬೀದರ, ಸೆ.೦೮: ೨೦೨೩ನೇ ಸಾಲಿನ ಸಮೀಕ್ಷೆಯಲ್ಲಿ ಅಪೌಷ್ಠಿಕತೆಯಲ್ಲಿ ಕೋಲಾರ ಮತ್ತು ಬೀದರ ಜಿಲ್ಲೆಗಳು ಗುರುತಿಸಿಕೊಂಡಿವೆ, ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿ ತಾಯಂದಿರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡಿ ರಕ್ತ ಹೀನೆಯನ್ನು ಕಡಿಮೆ ಮಾಡುವುದರಲ್ಲಿ ಶ್ರಮ ಪಡಿಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಸಕಾಲದಲ್ಲಿ ಪೌಷ್ಠಿಕ ಆಹಾರ, ಶುದ್ಧ ಕುಡಿಯುವ ನೀರು ಮತ್ತು ಆರೋಗ್ಯ ತಪಾಸಣೆಯನ್ನು ಕೈಗೊಳ್ಳಬೇಕು. ಬೀದರ ಜಿಲ್ಲೆಯನ್ನು ಅಪೌಷ್ಠಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ಸಹಭಾಗೀದಾರ ಇಲಾಖೆಯವರು ಕೈಜೋಡಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಮ್ ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೊಡೆ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಬೀದರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಬಾಲಭವನ ಬೀದರದಲ್ಲಿ ಹಮ್ಮಿಕೊಂಡಿದ್ದ ರಾಷ್ಟಿçÃಯ ಪೌಷ್ಠಿಕ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿರುವುದರಿಂದ ನಮ್ಮ ಪೂರ್ವಜರು ಮನೆಯ ಹಿತ್ತಲಲ್ಲಿಯೇ ಕಾಯಿ ಪಲ್ಯಗಳನ್ನು ಬೆಳೆದು ಅದನ್ನೇ ಸೇವಿಸುತ್ತಿದ್ದರು. ಆದರೆ ಬದಲಾದ ಕಾಲದಲ್ಲಿ ಕೀಟ ನಾಶಕಗಳನ್ನು ಅತೀ ಹೆಚ್ಚಾಗಿ ಬಳಸಿದ ಕಾಯಿ ಪಲ್ಯಗಳನ್ನು ಮತ್ತು ದವಸ ಧಾನ್ಯಗಳನ್ನು ತಿನ್ನುತ್ತಿದ್ದೇವೆ. ಅಲ್ಲದೇ ಇಂದಿನ ದಿನಮಾನಗಳಲ್ಲಿ ಕಲಬೆರಕೆಯ ಪದಾರ್ಥಗಳನ್ನು ಬಳಸುತ್ತಿರುವುದು ಹೆಚ್ಚಾಗುತ್ತಿದೆ ಇದರಿಂದ ಅನಾರೋಗ್ಯ ಉಂಟಾಗುತ್ತಿದೆ. ಆದ್ದರಿಂದ ಜನರಲ್ಲಿ ಪೌಷ್ಠಿಕ ಆಹಾರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ಸದೃಢ ತಾಯಿಯಿಂದ ಸದೃಢ ಮಗು ಜನಿಸುವಂತೆ ನಾವೇಲ್ಲರೂ ಸೇರಿ ಕೆಲಸ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ ಉಪನಿರ್ದೇಶಕರಾದ ಗುರುರಾಜ, ಬೀದರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪ ಪಾಟೀಲ, ಕಾರ್ಯದರ್ಶಿ ನಾಗೇಂದ್ರ ಬಿರಾದಾರ, ಬೀದರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶಾರದಾ ಕಲ್ಮಲಕರ, ಬೀದರ ತಾಯಿ ಮತ್ತು ಮಕ್ಕಳ ಆರೋಗ್ಯಾಧಿಕಾರಿಗಳಾದ ಶಿವಶಂಕರ ಭತಮುರ್ಗಿ, ಬೀದರ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರಜೀಯಾ ಬಳಬಟ್ಟಿ ಬೀದರ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪೂರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.