ಮನಗನಾಳ ಶಿಕ್ಷಕರ ವೃತ್ತಿ ಘನತೆ ಹೆಚ್ಚಿಸಿದ್ದಾರೆ:ಪೂಜಾರಿ
ಸೈದಾಪುರ:ಸೆ.೮:ತಮ್ಮ ಸೇವಾ ಅವಧಿಯಲ್ಲಿ ಕೈಗೊಂಡ ಉತ್ತಮ ಕಾರ್ಯ ಪ್ರವೃತ್ತಿಯಿಂದ ಬಸವರಾಜ ಮನಗಾಳ ಅವರು ಶಿಕ್ಷಕರ ವೃತ್ತಿಯ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಕ್ಷೇತ್ರ ಸಮನ್ವಯಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಅಭಿಪ್ರಾಯಪಟ್ಟರು.
ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ ಸೈದಾಪುರ ವಲಯದ ಬಿಆರ್‌ಪಿಯಾಗಿ ಸೇವೆ ಸಲ್ಲಿಸಿ ಇತ್ತಿಚಿಗೆ ಯಾದಗಿರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಬಸವರಾಜಪ್ಪ ಮನಗನಾಳ ಅವರಿಗೆ ವಲಯದ ವತಿಯಿಂದ ಹಮ್ಮಿಕೊಂಡ ಬೀಳ್ಕೊಡಿಗೆ ಹಾಗೂ ನೂತನ ಬಿಆರ್‌ಪಿಯಾಗಿ ಬಂದ ವಿಜಯಕುಮಾರ ಅವರ ಸ್ವಾಗತ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪವಿತ್ರವಾದ ವ್ಯಕ್ತಿತ್ವ ರೂಪಿಸುವ ವೃತ್ತಿ ಇದಾಗಿದೆ. ಇದನ್ನು ತಮ್ಮ ಕಾರ್ಯ ವಿಧಾನ ಸಂದರ್ಭದಲ್ಲಿ ಅನುಭವದೊಂದಿಗೆ ನಿರ್ವಹಿಸಿ ಈ ಭಾಗದ ಶಿಕ್ಷಕರ ಗೌರವಕ್ಕೆ ಬಸವರಾಜಪ್ಪ ಅವರು ಪಾತ್ರರಾಗಿದ್ದಾರೆ. ಅವರ ವ್ಯಕ್ತಿತ್ವ ಗುಣಗಳು ನಮಗೆ ಮಾದರಿಯಾಗಬೇಕು ಎಂದು ಹೇಳಿದರು.
ಸನ್ಮಾನಿತರಾಗಿ ಬಸವರಾಜ ಮನಗನಾಳ ಮಾತನಾಡಿ, ಪ್ರೀತಿಯಿಂದ ನನ್ನನ್ನು ಗೆಲ್ಲಿಸಿದ್ದೀರಿ. ನಿಮ್ಮ ಸಹಕಾರದಿಂದ ನಾನು ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ಸರಕಾರದ ಆದೇಶಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದ್ದೇನೆ. ಇದಕ್ಕೆ ನಿಮ್ಮ ಸಹಕಾರವೇ ಕಾರಣವಾಗಿದೆ. ನಿಮಗೆ ಕೊಟ್ಟಿರುವ ಕೆಲಸವನ್ನು ಕಾಲ ಕಾಲಕ್ಕೆ ಸರಿಯಾದ ರೀತಿಯಲ್ಲಿ ನಿರ್ವಹಿಸಿದರಿಂದ ತೊಂದರೆ ಇಲ್ಲದೆ ಸೇವೆ ಮಾಡಲು ಸಾಧ್ಯವಾಯಿತು ಎಂದು ಭಾವುಕರಾಗಿ ಮಾತನಾಡಿದರು.
ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲರ ಸಹಕಾರ ಅತಿ ಮುಖ್ಯವಾಗಿದೆ. ನಾನು ಸೈದಾಪುರ ವಲಯ ಮಟ್ಟದಲ್ಲಿ ಬಿಆರ್‌ಪಿಯಾಗಿ ೬ ವರ್ಷಗಳ ವರೆಗೆ ಸಲ್ಲಿಸಿದ ಸೇವೆ ತೃಪ್ತಿಯನ್ನುಂಟು ಮಾಡಿದೆ. ಇದೆ ವಿದಧ ಸಹಕಾರ ನೂತನವಾಗಿ ಬಂದವರಿಗೆ ನೀಡುವ ಮೂಲಕ ಈ ಭಾಗದ ಮಹತ್ವ ಹೆಚ್ಚಾಗುವಂತೆ ಮಾಡಬೇಕು.