ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಲು ಸೂಚನೆ
ಕಲಬುರಗಿ,ಸೆ..06:ಪ್ರಸಕ್ತ 2024-25ನೇ ಸಾಲಿನಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಜಿಲ್ಲೆಯ ಸಾರ್ವಜನಿಕರು ಜೇಡಿ ಮಣ್ಣನಿಂದ ತಯಾರಿಸಿದ ಮತ್ತು ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಿ ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯಾದ್ಯಂತ ಪಿ.ಓ.ಪಿ. ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ತಯಾರಿಸುವುದಾಗಲಿ/ ಮಾರಾಟ ಮಾಡುವುದಾಗಲಿ/ ಸಂಗ್ರಹ ಮಾಡುವುದಾಗಲಿ/ ಸಾಗಾಣಿಕೆ ಮಾಡುವುದಾಗಲಿ ಇತ್ಯಾದಿಗಳನ್ನು ಪರಿಸರಕ್ಕೆ ಮಾರಕವೆಂದು ರಾಜ್ಯ ಸರ್ಕಾರವು ಈಗಾಗಲೇ ನಿಷೇಧಿಸಿದೆ. ಈ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಲಬುರಗಿ ಪ್ರಾದೇಶಿಕ ಕಚೇರಿ ವತಿಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ನಿಷೇಧಿತ ವಿಗ್ರಹಗಳನ್ನು ಪ್ರತಿಷ್ಠಾಪಿಸಬಾರದು.
ಜೇಡಿ ಮಣ್ಣಿನಿಂದ ತಯಾರಿಸಿದ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳು ಕಲಬುರಗಿ ಸೇಡಂ ರಸ್ತೆಯ ಸ್ವಾಭಿಮಾನ ಸ್ವದೇಶಿ ಕೇಂದ್ರ ಹಾಗೂ ಕಲಬುರಗಿ ಗೋದುತಾಯಿ ಕಾಲೋನಿಯ ಸ್ವಾಭಿಮಾನ ಸ್ವದೇಶಿ ಕೇಂದ್ರದಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.