ಪತ್ರಿಕಾ ವಿತರಕರ ಕಾಯಕ ಶ್ರೇಷ್ಠವಾದದ್ದು: ಮಾಮಡಿ
ಭಾಲ್ಕಿ: ಸೆ.6:ಪ್ರತಿನಿತ್ಯ ತಪ್ಪದೇ ಪತ್ರಿಕೆಗಳನ್ನು ಮನೆ, ಮನೆಗೆ ಮುಟ್ಟಿಸುವ ಪತಿಕಾ ವಿತರಕರ ಕಾಯಕ ಶ್ರೇಷ್ಠವಾಗಿದೆ ಎಂದು ಕಸಾಪ ತಾಲೂಕು ಅದ್ಯಕ್ಷ ನಾಗಭೂಷಣ ಮಾಮಡಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ನೌಕರರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿನಿತ್ಯ ಮಳೆ, ಛಳಿಯನ್ನದೇ ಸೂರ್ಯೋದಯಕ್ಕೂ ಮುನ್ನ ಎಲ್ಲಾ ವಾರ್ತಾ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಪತ್ರಿಕಾ ವಿತರಕರ ಕಾಯಕ ನಿಷ್ಠೆ ಅಗಮ್ಯವಾಗಿದೆ. ಒಂದು ದಿನವೂ ಮನೆಯಲ್ಲಿ ಕೂಡದೇ, ಪ್ರತಿನಿತ್ಯ ತಮ್ಮ ಕಾಯಕವೇ ಮೂಲ ಸಿದ್ದಾಂತ ವೆಂದು ತಿಳಿದು ಪತ್ರಿಕೆ ವಿತರಿಸುತ್ತಾರೆ. ಇಂತಹ ಪತ್ರಿಕಾ ವಿತರಕರನ್ನು ಗುರುತಿಸುವ ಕಾರ್ಯ ಶ್ರೇಷ್ಠವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೆಪ್ಪ ಪಾಟೀಲ, ಪತ್ರಿಕಾವಿತರಣೆ ಕಾರ್ಯ ತುಂಬಾ ಕಠಿಣ ವಾಗಿದೆ, ಒಂದು ದಿನವೂ ಪತ್ರಿಕೆ ಮನೆಗೆ ತಲುಪಿಲ್ಲ ಎಂದರೇ ತಕ್ಷಣವೇ ಅವರಿಗೆ ದೂರವಾಣಿ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಒಂದು ದಿನವೂ ತಪ್ಪದೇ ಪ್ರತಿಯೊಬ್ಬರ ಮನೆಗೂ ಪತ್ರಿಕೆ ಮುಟ್ಟಿಸುವ ಕಾರ್ಯ ಮಾಡಬೇಕಿದೆ. ಹೀಗಾಗಿ ಯಾವುದೇ ಕೆಲಸಗಳಿದ್ದರೂ ಅದನ್ನು ಬದಿಗೊತ್ತಿ ಮೊದಲು ಪತ್ರಿಕೆ ತಲುಪಿಸುವ ಕಾರ್ಯಮಾಡುವುದು ತುಂಬಾ ಕಠಿಣ ಕಾರ್ಯವಾಗಿದೆ ಎಂದು ಹೇಳಿದರು.
ಇದೇವೇಳೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ ಸೇರಿದಂತೆ, ಪತ್ರಿಕಾ ವಿತರಕರಾದ ದಿಲೀಪ ಚನ್ನಾಳೆ, ರಾಜಗುರು ಮಾಗಾವೆ, ಫಯಾಜ್‍ಮಿಯ್ಯಾ ಪಟೀಲ, ಪ್ರಕಾಶ ಖರ್ಗೆ ಮತ್ತು ಮಾರ್ಕ್ ಬಸನೂರ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಶಿಕ್ಷಕಿಯರ ಜೊತೆಯಲ್ಲಿ ಪತ್ರಕರ್ತ ದೀಪಕ ಥಮಕೆ ಉಪಸ್ಥಿತರಿದ್ದರು.