ಕಡಣಿ: ಕಲ್ಲನಾಗರ ಮೇಲೆ ಮೂಡಿದ ಕೇಶ !
ಕಲಬುರಗಿ,ಅ.3-ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ಒಂದು ವರ್ಷದ ಹಿಂದೆ ಪ್ರತಿಷ್ಠಾಪಿಸಲಾಗಿದ್ದ ಶಿವಲಿಂಗದ ಮೇಲೆ ಕೆತ್ತಿರುವ ಕಲ್ಲನಾಗರ ಮೂರ್ತಿಯೊಳಗೆ ಕೇಶ (ಕೂದಲು) ಮೂಡಿರುವುದು ಆಶ್ಚರ್ಯ ಮೂಡಿಸಿದೆ.
2023ರ ಜುಲೈ 2 ರಂದು ಹವಾ ಮಲ್ಲಿನಾಥ ಮಹಾರಾಜರು ಕಡಣಿ ಗ್ರಾಮದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ್ದರು. ಈ ಲಿಂಗದ ಮೇಲೆ ಕಲ್ಲನಾಗರ ಕೆತ್ತಲಾಗಿದ್ದು, ಅದರ ಮೇಲೆ ನಿಜವಾದ ಸರ್ಪಕ್ಕೆ ಕೂದಲು ಬರುವಂತೆ ಕೂದಲು ಬಂದಿದೆ. ಈ ದೃಶ್ಯ ನೋಡಲು ಕಡಣಿಯಲ್ಲದೇ ಸುತ್ತಮುತ್ತಲ್ಲಿನ ಮಿಣಜಗಿ, ಹಡಗಿಲ್ ಹಾರುತಿ, ಕೊಳ್ಳೂರ, ಹಾವನೂರ ಸೇರಿ ಹತ್ತಾರು ಗ್ರಾಮಗಳ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಬುಧವಾರ ಮಹಾಲಯ ಅಮಾವಾಸ್ಯೆಯಯಂದೇ ಕಲ್ಲ ನಾಗರಮೂರ್ತಿಯಲ್ಲಿ ಕೂದಲು ಮೂಡಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.
ಕಲ್ಲನಾಗರ ಮೂರ್ತಿಯ ಮೇಲೆ ಕೂದಲು ಮೂಡಿರುವ ಸುದ್ದಿ ಇದೀಗ ಎಲ್ಲೆಡೆ ಹರಡಿದ್ದು, ಇದನ್ನು ತಿಳಿದು ವಿವಿಧ ಗ್ರಾಮಗಳ ಜನ ಕಡಣಿ ಗ್ರಾಮಕ್ಕೆ ತೆರಳಿ ಈ ದೃಶ್ಯವನ್ನು ಕಣ್ಣಾರೆ ಕಂಡು ಆಶ್ಚರ್ಯ ಚಕಿತರಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಶಿವಲಿಂಗ ದರ್ಶನಕ್ಕೆ ಜನ ಜಾತ್ರೆಯೇ ನೆರೆಯುತ್ತಿದೆ. ಪೂಜೆ, ಪುನಸ್ಕಾರ, ಕಾಯಿ, ಕರ್ಪುರ, ನೈವೇದ್ಯ ಅರ್ಪಣೆ ಜೋರಾಗಿ ನಡೆಯುತ್ತಿದೆ.
ಇಂದಿನ ವೈಜ್ಞಾನಿಕ ಯುಗದಲ್ಲೂ ಜನ ಇಂತಹ ನಂಬಿಕೆಗಳಿಗೆ ಮಾರು ಹೋಗುತ್ತಿರುವುದು ಮಾತ್ರ ಜನ ಮರಳೋ, ಜಾತ್ರೆ ಮರಳೋ ಎನ್ನುವಂತಾಗಿದೆ.