ನಮಗೆ ದೊರಕಿದ ಹುದ್ದೆಗೆ ನ್ಯಾಯ ಒದಗಿಸಿದರೆ ಖಂಡಿತ ಯಶಸ್ಸುಃಶಂಕರ ಬೆಳ್ಳುಬ್ಬಿ
ಬಸವನಬಾಗೇವಾಡಿ,ಸೆ. 6:ಭಗವಂತ ನಮಗೆ ನೀಡಿದ ಹುದ್ದೆಯಲ್ಲಿ ಯಾವುದೇ ಮುಖವಾಡ ಧರಿಸದೇ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಆ ಹುದ್ದೆಗೆ ನ್ಯಾಯ ಒದಗಿಸಿದರೆ ಅದರಲ್ಲಿ ನಾವು ಖಂಡಿತ ಯಶಸ್ಸು ಸಾಧಿಸಬಹುದು ಎಂದು ಧಾರವಾಡ ವಾಣಿಜ್ಯ ತೆರಿಗೆ ಇಲಾಖೆಯ ಉಪಆಯುಕ್ತ ಶಂಕರ ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ನಾವು ಯಾವುದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರೂ ಆ ಹುದ್ದೆಗೆ ಮೋಸವಾಗದಂತೆ ಕಾರ್ಯ ಮಾಡುವುದು ಬಹು ಮುಖ್ಯ. ಶಿಕ್ಷಕ ಬಾಂಧವರ ಮೇಲೆ ಸಮಾಜದ ನಿರೀಕ್ಷೆ ಬಹಳಷ್ಟಿದೆ. ಶಿಕ್ಷಕರಲ್ಲಿರುವ ಅದ್ಭುತ ಶಕ್ತಿಯಿಂದಾಗಿ ಮಕ್ಕಳು ರಾಷ್ಟ್ರಪತಿ, ಪ್ರಧಾನಿ ಹುದ್ದೆ, ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಯಾವುದೇ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಎಲ್ಲ ವೃತ್ತಿಗಿಂತಲೂ ಶಿಕ್ಷಕ ವೃತ್ತಿಯಲ್ಲಿ ಸಂತೃಪ್ತಿ ಸಿಗುತ್ತದೆ. ಶಿಕ್ಷಕರಿಗೆ ಸಮಾಜ ಸುಧಾರಣೆ ಮಾಡುವ ಶಕ್ತಿಯಿದೆ ಎಂದರು.
ಶಿಕ್ಷಕ-ಗುರು ಎಂಬುವದು ಬೇರೆ ಬೇರೆಯಾಗಿದೆ. ಇಂದು ಶಿಕ್ಷಕರ ದಿನಾಚರಣೆವಿದೆ ಹೊರತು ಗುರು ದಿನಾಚರಣೆಯಲ್ಲಿ. ಸಂಬಳ ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರು ಶಿಕ್ಷಕರಾದರೆ, ಯಾವುದೇ ಫಲಾಪೇಕ್ಷೆಯಿಲ್ಲದೇ ಜ್ಞಾನ ನೀಡುವವರು ಗುರು ಆಗುತ್ತಾರೆ. ನಾನು 11 ವರ್ಷ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸಿ ನನ್ನ ತಂದೆ-ತಾಯಿ, ನನಗೆ ಕಲಿಸಿದ ಶಿಕ್ಷಕರ, ನಾನು ಕಲಿಸಿದ ವಿದ್ಯಾರ್ಥಿಗಳ ಆಶೀರ್ವಾದದಿಂದ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಒಂದು ನಯಾಪೈಸೆ ಇಲ್ಲದೇ ಇಂದು ತಮ್ಮ ಮುಂದೆ ಅಧಿಕಾರಿಯಾಗಿ ಮಾತನಾಡುತ್ತಿದ್ದೇನೆ. ಕಳೆದ 7 ವರ್ಷದಿಂದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಶಿಕ್ಷಕ ವೃತ್ತಿಯಲ್ಲಿ ಸಿಗುತ್ತಿದ್ದ ಸಂತೃಪ್ತಿ ಇಲ್ಲಿ ಸಿಗುತ್ತಿಲ್ಲ. ನಾನು ಅಧಿಕಾರಿಯಾಗಿದ್ದರೂ ಶಿಕ್ಷಕ ವೃತ್ತಿ ಬಿಟ್ಟಿಲ್ಲ. ನಾನು ರಜೆ ಬಂದರೆ ಸಾಕು ಶಾಲಾ-ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇನೆ. ಇದುವರೆಗೂ 5 ಲಕ್ಷ ವಿದ್ಯಾರ್ಥಿಗಳು ನನ್ನಿಂದ ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಇದರಲ್ಲಿ 200 ಕೆಎಎಸ್, 500-600 ವಿದ್ಯಾರ್ಥಿಗಳು ಪಿಎಸೈ ಹುದ್ದೆಗೆ ನೇಮಕವಾಗಿದ್ದಾರೆ. ನನಗೆ ಕಲಿಸಿದ ಶಿಕ್ಷಕರಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು. ಶಿಕ್ಷಕರು ಕೇವಲ ಬಿಲ್-ಬೆಲ್ಗಾಗಿ ಕಾರ್ಯನಿರ್ವಹಿಸುವಂತಾಗಬಾರದು. ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತಾಗಬೇಕೆಂದರು.
ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ನಾನು 7 ವರ್ಷ ಕಾಲ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದೇನೆ. ದೇಶದ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕ ಬಾಂಧವರ ಮೇಲಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಕ್ಕರೆ ಅವರು ಸತ್ಪ್ರಜೆಗಳಾಗಿ ಹೊರಹೊಮ್ಮುತ್ತಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಅಭಿವೃದ್ಧಿಗೆ ಶಿಕ್ಷಕರು ಶ್ರಮಿಸಬೇಕೆಂದರು.
ಸಾನಿಧ್ಯ ವಹಿಸಿದ್ದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿಕ್ಷಕರ ಮೇಲೆ ಇರುವ ಗೌರವ ದೊಡ್ಡದ್ದು. ನಮ್ಮನ್ನು ಸೇರಿದಂತೆ ಎಲ್ಲರೂ ಶಿಕ್ಷಕರು ಕಲಿಸಿದ ಅಕ್ಷರದಿಂದಲೇ ಜೀವನದಲ್ಲಿ ದೊಡ್ಡವರಾಗಿದ್ದಾರೆ. ಸ್ವಾರ್ಥರಹಿತ ಶಿಕ್ಷಣ ನೀಡಬೇಕು. ಜ್ಞಾನವನ್ನು ಹೆಚ್ಚಾಗುವ ರೀತಿಯಲ್ಲಿ ಶಿಕ್ಷಕರು ಸೇವೆ ಸಲ್ಲಿಸುವಂತಾಗಬೇಕು. ಇಂದು ಎಲ್ಲೆಡೆ ಖಾಸಗಿ ಶಾಲೆಗಳ ಪ್ರಭಾವ ಕಾಣುತ್ತೇವೆ. ಸರ್ಕಾರಿ ಶಾಲೆಯಲ್ಲಿರುವ ಶಿಕ್ಷಕರು ಉತ್ತಮ ಶಿಕ್ಷಣ ನೀಡುವ ಮೂಲಕ ಖಾಸಗಿ ಶಾಲೆಗಳ ಪ್ರಭಾವ ಕಡಿಮೆಯಾಗಿ ಸರ್ಕಾರಿ ಶಾಲೆಗಳ ಪ್ರಭಾವ ಹೆಚ್ಚಾಗುವಂತೆ ಸಂಕಲ್ಪ ಮಾಡಿ ಕಾರ್ಯನಿರ್ವಹಿಸುವಂತಾಗಬೇಕೆಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬಿಇಓ ವಸಂತ ರಾಠೋಡ, ಕರವೇ ಮುಖಂಡ ಅಶೋಕ ಹಾರಿವಾಳ ಮಾತನಾಡಿದರು.
ವೇದಿಕೆಯಲ್ಲಿ ಇಟಗಿಯ ಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ನ್ಯಾಯವಾದಿ ಬಿ.ಕೆ.ಕಲ್ಲೂರ, ಧುರೀಣರಾದ ಶಿವನಗೌಡ ಬಿರಾದಾರ, ಸಂಗಮೇಶ ಓಲೇಕಾರ, ನೀಲು ನಾಯಕ, ತಾಪಂ ಇಓ ಪ್ರಕಾಶ ದೇಸಾಯಿ, ಅಕ್ಷರ ದಾಸೋಹದ ಅಧಿಕಾರಿ ಎಸ್.ಎಚ್.ಬಿರಾದಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ,ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಪಿ.ನಾಗಾವಿ ಇತರರು ಇದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ ನಾಯಕ ಸ್ವಾಗತಿಸಿದರು. ಎಸ್.ಎಸ್.ಅಂಬಲಿ, ಭಾರತಿ ಪಾಟೀಲ, ಮಹೇಶ ಪೂಜಾರಿ ನಿರೂಪಿಸಿದರು. ಶರಣು ದಳವಾಯಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಜ್ಯೋತಿಬಾ ಫುಲೆ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಅಖಂಡ ತಾಲೂಕಿನಲ್ಲಿ ನಿವೃತ್ತಗೊಂಡ ಶಿಕ್ಷಕರನ್ನು, ಸಮಾರಂಭಕ್ಕೆ ಸಹಾಯ-ಸಹಕಾರ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಇಂದು ಉಪನ್ಯಾಸ ನೀಡಿದ ಕೆಎಎಸ್ ಅಧಿಕಾರಿ ಶಂಕರ ಬೆಳ್ಳುಬ್ಬಿ ಅವರು ತಮಗೆ ಕಲಿಸಿದ ಗುರುಗಳಿಗೆ ವೇದಿಕೆಯ ಮೇಲೆ ಸನ್ಮಾನಿಸಿ ಅವರಿಗೆ ನಮಸ್ಕರಿಸುವ ಮೂಲಕ ಗುರು ನಮನ ಸಲ್ಲಿಸಿದ್ದು ಹೃದಯಸ್ಪರ್ಶಿಯಾಗಿತ್ತು.