ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು : ಚಿದಾನಂದ ಸವದಿ
ಅಥಣಿ :ಸೆ.6: ಕಲ್ಲನ್ನು ಕೆತ್ತಿ ಸುಂದರ ಮೂರ್ತಿಯನ್ನಾಗಿಸುವ ಶಿಲ್ಪಿಯಂತೆ ಮಕ್ಕಳ ಭವಿಷ್ಯವನ್ನು ರೂಪಿಸುವವರು ಶಿಕ್ಷಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿಯೊಬ್ಬರ ಜೀವನದಲ್ಲಿಯೂ ಶಿಕ್ಷಕರ ಪಾತ್ರವು ಬಹು ದೊಡ್ಡದು ಎಂದು ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ ಹೇಳಿದರು.
ಅವರು ಗುರುವಾರ ಇಲ್ಲಿನ ಗಚ್ಚಿನ ಮಠದ
ಸಭಾಂಗಣದಲ್ಲಿ ತಾಲೂಕಾ ಆಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ತಂದೆ ತಾಯಿ ಜನ್ಮ ನೀಡಿದರೆ ಅವರ ಬದುಕಿಗೆ ಜ್ಞಾನದ ಬೆಳಕು ನೀಡಿ ಸನ್ಮಾರ್ಗದಲ್ಲಿ ನಡೆಸುವ ಗುರುಗಳ ಪಾತ್ರ ಮಹತ್ತರವಾಗಿದೆ. ಜ್ಞಾನಕ್ಕಿಂತ ಮಿಗಿಲಾದ ವಸ್ತು ಜಗತ್ತಿನಲ್ಲಿ ಯಾವುದು ಇಲ್ಲ, ಪ್ರತಿಯೊಬ್ಬರ ಅಕ್ಷರ ಜ್ಞಾನ ಸಂಪಾದನೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ಎಂದರು.
ಈ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ
ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಗುರು ಅಥವಾ ಶಿಕ್ಷಕ ಎಂಬ ಹುದ್ದೆಗೆ ಬಹಳಷ್ಟು ಗೌರವವಿದೆ. ನಮ್ಮ ಶಿಕ್ಷಕರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಶ್ರೇಷ್ಠ ಶಿಕ್ಷಕ ಹಾಗೂ ಶಿಕ್ಷಣ ತಜ್ಞ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಆದರ್ಶಗಳನ್ನ ಮೈಗೂಡಿಸಿಕೊಳ್ಳಬೇಕು. ಗುರುವಿನ ಸ್ಥಾನ ಹೊಂದಿರುವ ಶಿಕ್ಷಕರು ತಮ್ಮ ವೃತ್ತಿಯ ಗೌರವವನ್ನು ಕಾಪಾಡಿಕೊಂಡು ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾರ್ಜನೆ ಮಾಡಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ಈ ವೇಳೆ ಸಮಾರಂಭದಲ್ಲಿ ಕವಲಗುಡ್ಡ ಸಿದ್ದಾಶ್ರಮದ ಅಮರೇಶ್ವರ ಮಹಾರಾಜರು ಉಪನ್ಯಾಸ ನೀಡಿ ಮಾತನಾಡಿ ಸದೃಢ ಹಾಗೂ ಸಮೃದ್ಧ ಭಾರತವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ನಮ್ಮ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನ ಶಿಕ್ಷಕರು ಕಲಿಸಿ ಕೊಡಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೋರಟಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ, ವಿವಿಧ ಸಾಧಕ ಶಿಕ್ಷಕರಿಗೆ ತಾಲೂಕ ಆಡಳಿತದಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪುರಸಭೆಯ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ತಹಸೀಲ್ದಾರ್ ಸಿದ್ದರಾಮ ಬೋಸಗಿ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೋರಟಗಿ, ಕ್ಷೇತ್ರ ಸಮನ್ವಯಾಧಿಕಾರಿ ಗೌಡಪ್ಪ ಖೋತ, ಅಕ್ಷರ ದಾಸೋಹ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.