ಸ್ಪರ್ಧಾತ್ಮಕ ಜಗತ್ತು ಎದುರಿಸಲು ಪತ್ರಿಕೆಗಳ ಅಧ್ಯಯನ ಅಗತ್ಯ : ಪ್ರಕಾಶ ನಾಯಕ
ಬಸವಕಲ್ಯಾಣ:ಸೆ.6: ಈ ಕಾಲಘಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರತಿದಿನ ಸ್ಪರ್ಧೆ ಹೆಚ್ಚಾಗುತ್ತಿದೆ. ಸ್ಪರ್ಧಾತ್ಮಕ ಜಗತ್ತಿನ್ನು ಪ್ರವೇಶಿಸಲು ಹಾಗೂ ಎದುರಿಸಲು ನಿರಂತರ ಓದು ಅಧ್ಯಯನಗಳು ಅಗತ್ಯ ಎಂದು ಹುಬ್ಬಳ್ಳಿಯ ಪತ್ರಕರ್ತ ಪ್ರಕಾಶ ನಾಯಕ ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳ ಪಾತ್ರ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅವರು, ನಿತ್ಯ ಜ್ಞಾನದ ನವೀಕರಣ, ಹೊಸ ಹೊಸ ತಿಳುವಳಿಕೆ ಹೆಚ್ಚಿಸಿಕೊಳ್ಳುವ ಮೂಲಕ, ಪುಸ್ತಕ ಮತ್ತು ಪತ್ರಿಕೆಗಳ ಗಂಭೀರ ಓದಿನಿಂದ ಇಂದಿನ ಹಲವು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಾಧ್ಯ ಎಂದರು.
ಈ ಕಾಲದಲ್ಲಿ ಮೋಬೈಲ್ ಎಲ್ಲರಿಗೂ ಆಕರ್ಷಿಸುವ ವಸ್ತು. ಅದಿಲ್ಲದೆ ಇರಲೂ ಸಾಧ್ಯವಿಲ್ಲದ ಕಾಲಮಾನ ಇದು. ಆದರೆ ಮೋಬೈಲ್ ಬಳಕೆ ಅಧ್ಯಯನದ ಭಾಗವಾಗಿರಲಿ. ಮುದ್ರಣ ಮಾಧ್ಯಮದಲ್ಲಿ ಹೆಚ್ಚು ನಿಖರ ಮತ್ತು ವಸ್ತುನಿಷ್ಠ ಮಾಹಿತಿ ಸಿಗುತ್ತದೆ. ಆದ್ದರಿಂದ ಪ್ರತಿದಿನ ಪತ್ರಿಕೆಗಳು ಓದುವುದರಿಂದ ಪ್ರಚಲಿತ ವಿದ್ಯಮಾನಗಳು ನಿಖರವಾಗಿ ಅರಿಯಬಹುದು ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪತ್ರಿಕೆಗಳು ದಾರಿದೀಪವಾಗಿವೆ. ಪತ್ರಿಕೆಗಳಲ್ಲಿ ಬಳಸುವ ಭಾಷೆ, ವರ್ತಮಾನದ ರಾಜಕಾರಣ, ಆರ್ಥಿಕತೆ, ತಂತ್ರಜ್ಞಾನದ ಜ್ಞಾನ ಸೇರಿ ಹಲವು ಸಂಗತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಓದಿಗೆ ಅನುಕೂಲವಾಗಿವೆ ಎಂದರು.
ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ,
ಈ ನೆಲದಲ್ಲಿ ಹೊಸ ಪ್ರತಿಭೆಗಳು ಹೊರಹೊಮ್ಮಲು, ಹೊಸ ಕನಸುಗಳು ನಿಜವಾಗಲು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಅಧ್ಯಯನದ ಅವಶ್ಯಕತೆಯಿದೆ. ಪತ್ರಿಕೆಗಳು ಚರಿತ್ರೆ ಮತ್ತು ವರ್ತಮಾನದ ಕನ್ನಡಿಗಳು. ಅವುಗಳ ಓದು ಅಧ್ಯಯನದಿಂದ ಈ ಕಾಲದ ಸ್ಪರ್ಧೆಯಲ್ಲಿ ಪ್ರವೇಶಿಸಲು ಸಾಧ್ಯ.
ಪತ್ರಿಕೆಗಳಿಗೆ ಸಾಂಸ್ಕøತಿಕ ಚಹರೆಯಿದೆ. ರಾಜಕೀಯ , ಸಾಮಾಜಿಕ, ಆರ್ಥಿಕ ಆಯಾಮಗಳಲ್ಲಿ ಹೊಸ ಚಿಂತನೆ ಕಟ್ಟಿಕೊಡುವ ಗುಣವಿದೆ . ಪ್ರತಿದಿನ ಪತ್ರಿಕೆಗಳ ಓದಿನಿಂದ ಜ್ಞಾನ, ಮಾಹಿತಿ ಮತ್ತು ಅರಿವು ವಿಸ್ತಾರಗೊಳ್ಳುತ್ತದೆ ಎಂದರು.
ಪತ್ರಿಕೆಗಳು ಸಾಂಸ್ಕೃತಿಕ ಜಗತ್ತು ಕಟ್ಟಿಕೊಡಲು ಮಹತ್ವದ ಪಾತ್ರ ವಹಿಸಿದೆ. ಈ ನಾಡಿನ ಹಲವು ವಿದ್ವತ್ ಪರಂಪರೆಯ ಬರಹಗಾರರು ಬರೆದಿರುವ ಬರಹಗಳು ಸಾಮಾಜಿಕ ಸಂಶೋಧನೆಗೆ ದಾರಿಯಾಗಿವೆ. ಪತ್ರಿಕೆಗಳು ಎಲ್ಲ ಕಾಲಕ್ಕೂ ಎಲ್ಲ ಸಂದರ್ಭಗಳಲ್ಲೂ ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಸ್ಪಂದಿಸುತ್ತ ತನ್ನ ಬದ್ಧತೆ ಮತ್ತು ಹೊಣೆಗಾರಿಕೆ ಕಾಪಾಡಿಕೊಂಡು ಬಂದವೆ ಎಂದರು.
ಬಿಡಿಪಿಸಿ ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ ಅಧ್ಯಕ್ಷತೆ ವಹಿಸಿದ್ದರು.
ಹುಬ್ಬಳ್ಳಿಯ ಪತ್ರಕರ್ತ
ಸೋಮನಗೌಡರ್, ಕಲಬುರ್ಗಿಯ ಪ್ರಶಾಂತ,
ಪತ್ರಕರ್ತ ಮಾಣಿಕ ಭುರೆ,
ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶಟ್ಟಿ , ಶ್ರೀ ಬಸವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ್, ಉಪನ್ಯಾಸಕರಾದ ವಿವೇಕಾನಂದ ಶಿಂಧೆ, ಸಂಗೀತಾ ಮಹಾಗಾಂವೆ, ಪ್ರವೀಣ್ ಬಿರಾದಾರ, ಜಗದೇವಿ ಜವಳಿಗೆ , ರೋಶನ್ ಬೀ, ಶ್ರೀನಿವಾಸ ಉಮಾಪುರೆ, ಪವನ್ ಪಾಟೀಲ್, ಬಸವರಾಜ ಗುಂಗೆ ಮೊದಲಾದವರು ಇದ್ದರು.
ಚೆನ್ನಬಸಪ್ಪ ಗೌರ ಸ್ವಾಗತಿಸಿದರು. ಡಾ. ಬಸವರಾಜ ಖಂಡಾಳೆ ನಿರೂಪಿಸಿದರು.
ಗಂಗಾಧರ ಸಾಲಿಮಠ ವಂದಿಸಿದರು.