ಸರ್ವ ಕಾಲಕ್ಕೂ ಗುರುತಿಸಿ ಗೌರವಿಸುವ ಏಕಮಾತ್ರ ಹುದ್ದೆ ಶಿಕ್ಷಕರದ್ದು
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೬; ಸರ್ವ ಕಾಲಕ್ಕೂ ಎಲ್ಲರೂ ಗುರುತಿಸಿ ಗೌರವಿಸುವ ಏಕಮಾತ್ರ ಹುದ್ದೆ ಶಿಕ್ಷಕರದ್ದು. ಆದ್ದರಿಂದ ಶಿಕ್ಷಕರು ತಮ್ಮ ಸ್ಥಾನದ ಬಗ್ಗೆ ಸದಾ ಹೆಮ್ಮೆ ಮತ್ತು ಆತ್ಮತೃಪ್ತಿಯ ಭಾವನೆ ಹೊಂದಿರಬೇಕು ಎಂದು ಎಸ್ ಡಿ ಎಲ್ ಟ್ರಸ್ಟ್ ನ ಚಿಟ್ಟಕ್ಕಿ  ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಎಸ್ ಕೆ ಕುಮಾರ್ ಹೇಳಿದರು.ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರು ನಮ್ಮ ಭವ್ಯ ಭವಿಷ್ಯದ ಶಿಲ್ಪಿಗಳು. ನಾವು ಇಂದು ಏನಾಗಿದ್ದೇವೋ ಅದು ಅವರ ಮಾರ್ಗದರ್ಶನ ಪ್ರತಿಫಲ. ನಮ್ಮ ಜೀವನೋನ್ನತಿಗೆ ಶ್ರಮಿಸುವ ಶಿಕ್ಷಕರ ಶ್ರಮ ಮತ್ತು ಕೊಡುಗೆ ಅಪಾರ. ಆದ್ದರಿಂದ  ಶಿಕ್ಷಕರನ್ನು  ಸದಾ ಸ್ಮರಿಸಿ ನಮಿಸೋಣ. ಅವರು ಕಲಿಸಿಕೊಟ್ಟ ಜೀವನಾದರ್ಶಗಳನ್ನು ಪಾಲಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.