ಶಿಕ್ಷಕ ವೃತ್ತಿಗಿದೆ ಸಮಾಜ ತಿದ್ದುವ ಶಕ್ತಿ
ಕೋಲಾರ,ಸೆ೬:ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಸಮಾಜವನ್ನೇ ತಿದ್ದುವ ಶಕ್ತಿ ನಿಮಗಿದೆ, ತಂದೆ,ತಾಯಿಯ ಮಾತೂ ಕೇಳದವನು ಶಿಕ್ಷಕರೊಬ್ಬರ ಮುಂದೆ ತಲೆ ತಗ್ಗಿಸುತ್ತಾನೆ ಎಂದರೆ ಈ ವೃತ್ತಿಗೆ ಇರುವ ಮಹಿಮೆ ಅರ್ಥಮಾಡಿಕೊಳ್ಳಿ ದೇಶಕ್ಕೆ ಉತ್ತಮ ಸಾಧಕರ ಕೊಡುಗೆ ನೀಡಿ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಕರೆ ನೀಡಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ,ಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಹಾಗೂ ನಿವೃತ್ತರಾದ ಶಿಕ್ಷಕರ್‍ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಜೀವನದಲ್ಲಿ ಏನೂ ಉಳಿಯುವುದಿಲ್ಲ ಆದರೆ ಶಿಕ್ಷಕ ಕಲಿಸಿದ ವಿದ್ಯೆ ಸಾಯುವವರೆಗೂ ನಮ್ಮೊಂದಿಗೆ ಇರುತ್ತದೆ,ವಿದ್ಯೆಗೆ ಸಾವಿಲ್ಲ,ಇಡೀ ದೇಶ ನೀವು ನೀಡುವ ಶಿಕ್ಷಣದ ಮೇಲೆ ಅವಲಂಬಿಸಿದೆ ಎಂಬ ಸತ್ಯ ಅರಿತು ಜವಾಬ್ದಾರಿಯಿಂದ ಕೆಲಸ ಮಾಡಿ, ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತನ್ನಿ ಎಂದು ಕಿವಿಮಾತು ಹೇಳಿದರು.
ಕಳೆದೊಂದು ವರ್ಷದಿಂದ ಎಲ್ಲಾ ಸರ್ಕಾರಿ ಶಾಲೆಗಳ ಆಸ್ತಿ ದಾಖಲೆ ಮಾಡಿಸಲು ಕ್ರಮವಹಿಸಿದ್ದು, ಸರಿಸುಮಾರು ಎಲ್ಲಾ ಶಾಲೆಗಳಿಗೂ ಖಾತೆ,ಇ ಸ್ವತ್ತು ಆಗಿದೆ ಎಂದ ಅವರು, ೭ನೇ ವೇತನ ಆಯೋಗ ಜಾರಿ ಮೂಲಕ ಸಿದ್ದರಾಮಯ್ಯ ಸರ್ಕಾರ ನಿಮ್ಮೊಂದಿಗೆ ನಿಂತಿದೆ ಎಂದರು.
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ,ಸಾಮಾನ್ಯ ಶಿಕ್ಷಕರಾಗಿದ್ದ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾದರು ಇದಕ್ಕೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿಕೊಟ್ಟಿದೆ, ಅವರ ಆದರ್ಶಗಳನ್ನು ಮಾದರಿಯನ್ನಾಗಿಸಿ ಕೊಂಡು ಪಾಲನೆ ಮಾಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಲಾ ೬ ಶಿಕ್ಷಕರಂತೆ ೧೮ ಮಂದಿಯನ್ನು ೫ ಸಾವಿರ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಈ ಸಾಲಿನಲ್ಲಿ ನಿವೃತ್ತರಾದ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿದರು. ಉಪಾಧ್ಯಕ್ಷೆ ಸಂಗೀತಾ, ಬೆಂಗಳೂರುಉತ್ತರವಿವಿ ಸಿಂಡಿಕೇಟ್ ಸದಸ್ಯ ಗೋಪಾಲಗೌಡ, ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ, ಶಿವಕುಮಾರ್, ಕೆಯುಡಿಎ ಅಧ್ಯಕ್ಷ ಮಹಮದ್ ಹನೀಫ್,ಶಿಕ್ಷಣಾಧಿಕಾರಿಗಳಾದ ವೀಣಾ, ತಿಮ್ಮರಾಯಪ್ಪ, ಬಿಇಒ ಉಮಾದೇವಿ, ನೋಡಲ್ ಅಧಿಕಾರಿ ಶಂಕರೇಗೌಡ,ವಿಷಯ ಪರಿವೀಕ್ಷ ಸನಾವುಲ್ಲಾ, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಆರ್.ನಾಗರಾಜ್,ಎಸ್.ನಾರಾಯಣಸ್ವಾಮಿ, ಚಂದ್ರಪ್ಪ, ಆಂಜನೇಯ, ಕೆ.ಟಿ.ನಾಗರಾಜ್, ಮುನಿಯಪ್ಪ, ಜಿ.ಶ್ರೀನಿವಾಸ್,ಶಿವಕುಮಾರ್,ನಾರಾಯಣರೆಡ್ಡಿ,ಸತೀಶ್‌ಕುಮಾರ್, ಶ್ರೀರಾಮ್, ಇಸಿಒಗಳಾದ ಕೆ.ಶ್ರೀನಿವಾಸ್, ನಂಜುಂಡಗೌಡ ಮತ್ತಿತರರಿದ್ದರು.
ದೈಹಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ನಾಗರಾಜ್ ನಿರೂಪಿಸಿ,ಶಿಕ್ಷಕಿ ಕಸ್ತೂರಿ ತಂಡ ಪ್ರಾರ್ಥಿಸಿ, ಶಿಕ್ಷಕ ಕೆ.ಎಸ್.ಮುನಿರಾಜು ತಂಡ ನಾಡಗೀತೆ,ರೈತಗೀತೆ ನಡೆಸಿಕೊಟ್ಟರು..