ಎಲ್ಲೆಡೆ ಗಣೇಶನ ಸಂಭ್ರಮ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.06: ನಗರದೆಲ್ಲೆಡೆ ವಿಘ್ನ ನಿವಾರಕ ವಿನಾಯಕ ವಿಗ್ರಹಗಳ ಪ್ರತಿಷ್ಟಾಪನೆಯ ಸಡಗರ, ಸಂಭ್ರಮ.  ಬೀದಿ, ಬೀದಿಯಲ್ಲೂ,ಓಣಿ ಓಣಿಗಳಲ್ಲೂ ಗಣೇಶನನ್ನೂ ಕೂಡಿಸುವ ಮಂಟಪಗಳ ರಚನೆಯ ಕಾರ್ಯ ಭರದಿಂದ ಸಾಗಿರುವುದು ಒಂದು ಕಡೆಯಾದರೆ. ಮತ್ತೊಂದು ಕಡೆ ವಿವಿಧ ಆಕೃತಿಗಳ ವರ್ಣದ ಮೂಸಕವಾಹನನ ಮೂರ್ತಿಗಳ ಮಾರಾಟದ ಭರಾಟೆಯೂ ನಡೆದಿದೆ.
ನಾಳೆ ವಿನಾಯಕನ ಚೌತಿ, ಮನೆಗಳಲ್ಲಿ ಬೆಳಿಗ್ಗೆ ಮೋದಕಪ್ರಿಯನನ್ನು ಪೂಜಿಸಲು ಮಾರುಕಟ್ಟೆಯಲ್ಲಿ ಜನತೆ  ಗಣೇಶನ ವಿಗ್ರಹ ಮತ್ತು ಹೂ ಹಣ್ಣು ಖರೀದಿ ನಡೆದಿದೆ. ಸಹಜವಾಗಿ ಅವುಗಳ ಬೆಲೆಯೂ ಹೆಚ್ಚಿದೆ.
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ರಸಾಯನಿಕ ಬಣ್ಣ ಲೇಪಿತ ಗಣೇಶನನ್ನು ಕೂಡಿಸಬೇಡಿ ಎಂದರೂ, ತಯಾರಿಕರಿಂದ ಇನ್ನೂ ಮಾರುಕಟ್ಟೆಯಲ್ಲಿಆಕರ್ಷಕವಾದ ಈ ಮೂರ್ತಿಗಳದ್ದೇ ಮಾರಾಟ ನಡೆಯುತ್ತಿದೆ. ಇವುಗಳ ಜೊತೆಗೆ ಈಗ ಒಂದಿಷ್ಟು ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಇರವುದರಿಂದ ಕೇವಲ ಮಣ್ಣಿನಿಂದ ತಯಾರಿಸಿರುವ ಮತ್ತು ಬಣ್ಣರಹಿತ ಗಣೇಶ ಮೂರ್ತಿಗಳ ಬೇಡಿಕೆಯೂ ಹೆಚ್ಚುತ್ತಿರುವುದರಿಂದ ಅಂತಹ ಮೂರ್ತಿಗಳ ಮಾರಾಟವೂ  ಮಾರಾಟವೂ ನಡೆದಿದೆ.
ವಿಪರ್ಯಾಸವೆಂದರೆ ಪರಿಸರಕ್ಕೆ ಮಾರಕವಾದ ಮೂರ್ತಿಗಳು ಕನಿಷ್ಟ 150 ರೂ ನಿಂದ 1500 ರೂ ವರೆಗೆ ಮಾರಾಟ ಮಾಡುತ್ತಿದ್ದರೆ. ಪರಿಸರ ಸ್ನೇಹಿಯಾದ ಮಣ್ಣಿನ ಗಣೇಶ 100 ರೂನಿಂದ 500 ರೂ ಒಳಗೆ ಮಾರಾಟವಾಗುತ್ತಿವೆ.
ಇನ್ನು ಸಾರ್ವಜನಿಕವಾಗಿ ಮಂಟಪಗಳಲ್ಲಿ ಗಣೇಶನನ್ನು ಕೂಡಿಸುವ ಸಂಘ ಸಂಸ್ಥೆಗಳು, ಮಕ್ಕಳು ವಿವಿಧ ಸ್ವರೂಪದ ಮಂಟಪಗಳನ್ನು ರಚಿಸಿದ್ದಾರೆ. ವಿದ್ಯುತ್ ಅಲಂಕಾರ, ಹಸಿರು ತೋರಣ, ಹೂ ಅಲಂಕಾರ ಮಾಡುತ್ತಿದ್ದು. ತಮಗೆ ಬೇಕಾದ ಗಣೇಶ ಮೂರ್ತಿಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಕಾರ್ಯ ನಡೆದಿದೆ.  ಇನ್ನು ಕೆಲವರು ಕಲಾವಿದರಿಂದ ತಮಗೆ ಬೇಕಾದ ರೂಪದ ಗಣೇಶ ಮೂರ್ತಿಗಳನ್ನು ರಚಿಸಿಕೊಂಡಿದ್ದಾರೆ.
ನಗರದಲ್ಲಿ ನಾಲ್ಕೂ ನೂರಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶನನ್ನು ಪ್ರತಿಷ್ಟಾಪನೆ ಮಾಡಲು ಪೊಲೀಸ್, ಪಾಲಿಕೆ, ವಿದ್ಯುತ್ ಇಲಾಖೆಗಳ ಅನುಮತಿ ಕೋರಲಾಗಿದೆ.
ನಗರದ ತಾಳೂರು ರಸ್ತೆಯ ಗೋವಿಂದಪ್ಪ ಕಲ್ಯಾಷ ಮಂಟಪದ ಬಳಿ ಗಣೇಶನ ಪ್ರತಿಷ್ಠಾಪನೆಗೆ ಪ್ಯಾರೀಶ್ ನ ಐಫಲ್ ಟವರ್ ಮಾದರಿ‌ ನಿರ್ಮಿಸಿರುವುದು ಜನಾಕರ್ಷಕವಾಗಿದೆ.  ಇದೇ ರೀತಿ ಮೇದಾರ ಓಣಿ, ತೇರು ಬೀದಿ, ಹೂವಿನ‌ಬಜಾರ್, ಕೌಲ್ ಬಜಾರ್ ನ ಸೇಠರ ಗಣೇಶ್ ಸೇರಿದಂತೆ ಅನೇಕ ಕಡೆ ಆಕರ್ಷಕ‌ಮಂಟಪಗಳ ರಚನೆ ನಡೆದಿದೆ. ಇನ್ನು ನಗರದಲ್ಲಿ ಈ ಬಾರಿ ವಿಶೇಷವಾಗಿ ಎಂ.ಜಿ.ಬಳಿಯ ಗಣೇಶ ಅಯೋಧ್ಯೆಯ ರಾಮ ಮಂದಿರ ಮಾದರಿಯಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ.